ಮೈಸೂರು: ಭಿಕ್ಷುಕಿ ಬಳಿ ಇದ್ದ ೧೦ ಸಾವಿರ ಹಣಕ್ಕಾಗಿ ಆಕೆಯನ್ನು ಕೊಲೆ ಮಾಡಲಾಗಿದೆ. ನಗರದ ನಂಜುಮಳಿಗೆ ಸಮೀಪ ಈ ಘಟನೆ ನಡೆದಿದೆ. ಘಟನೆ ನಡೆದ ದಿನವೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಂಜುಮಳಿಗೆ ನಿವಾಸಿ ರವಿ ಬಂಧಿತನಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ದಿನವಿಡೀ ಭಿಕ್ಷೆ ಬೇಡುತ್ತಿದ್ದ ಮಹಿಳೆಯೊಬ್ಬರು ರಾತ್ರಿ ಹೊತ್ತು ನಂಜುಮಳಿಗೆ ಸಮೀಪದ ಸರಕಾರಿ ಕಟ್ಟಡವೊಂದರಲ್ಲಿ ಮಲಗುತ್ತಿದ್ದರು. ಎರಡು ದಿನದ ಹಿಂದೆ ಆಕೆಗೆ ಅಪಘಾತವಾಗಿತ್ತು. ಅಪಘಾತ ಮಾಡಿದ ಆಟೊ ಚಾಲಕ ಪರಿಹಾರವಾಗಿ ಆಕೆಗೆ ೧೦ ಸಾವಿರ ನೀಡಿದ್ದರು. ಇದನ್ನು ನೋಡಿದ್ದ ಆರೋಪಿ ರವಿ, ಗುರುವಾರ ನಸುಕಿನಲ್ಲಿ ಮಹಿಳೆ ಮಲಗಿದ್ದ ಸ್ಥಳಕ್ಕೆ ತೆರಳಿ ಆಕೆಯಿಂದ ಹಣ ಕಸಿಯಲು ಮುಂದಾಗಿದ್ದಾನೆ. ಆಕೆ ಪ್ರತಿರೋಧ ವ್ಯಕ್ತಪಡಿಸಿದಾಗ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಸ್ಥಳದ ಕಟ್ಟಡವೊಂದರ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಸಂಬಂಧ ಕೆ.ಆರ್. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.