ವರದಿ :ಸ್ಟೀಫನ್ ಜೇಮ್ಸ್.
ಆಡಳಿತ ವ್ಯವಸ್ಥೆಯನ್ನು ಸುಗಮಗೊಳಿಸುವುದು ಹಾಗೂ ಸಾರ್ವಜನಿಕರ ದೈನಂದಿನ ಸಂಕಷ್ಟ ನಿವಾರಿಸುವ ಉದ್ದೇಶದಿಂದ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ 35 ಹಳ್ಳಿಗಳನ್ನು ಬೈಲಹೊಂಗಲ ತಾಲೂಕಿಗೆ ಸೇರಿಸಿ ರಾಜ್ಯ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ.
ಬೈಲಹೊಂಗಲಕ್ಕೆ ಕೇವಲ 3 ರಿಂದ 10 ಕಿ.ಮೀ ದೂರದಲ್ಲಿದ್ದರೂ 40–50 ಕಿ.ಮೀ ದೂರದ ಸವದತ್ತಿಗೆ ತಾಲೂಕು ಕಾರ್ಯಗಳಿಗಾಗಿ ಅಲೆಯಬೇಕಾಗಿದ್ದ ಸಾವಿರಾರು ಜನರಿಗೆ ಈ ನಿರ್ಧಾರ ಮಹತ್ತರ ಪರಿಹಾರವಾಗಿದೆ. ವಿದ್ಯಾರ್ಥಿಗಳು, ರೈತರು, ಮಹಿಳೆಯರು, ವೃದ್ಧರು ಹಾಗೂ ಸರ್ಕಾರಿ ನೌಕರರು ದಿನನಿತ್ಯ ಅನುಭವಿಸುತ್ತಿದ್ದ ತೀವ್ರ ತೊಂದರೆಗೆ ಇದರಿಂದ ಅಂತ್ಯ ಕಂಡಿದೆ.
ಮರಕುಂಬಿ ಗ್ರಾಮ ಬೈಲಹೊಂಗಲದಿಂದ ಕೇವಲ 3 ಕಿ.ಮೀ ದೂರದಲ್ಲಿದ್ದರೂ ಇದುವರೆಗೆ ಸವದತ್ತಿ ತಾಲ್ಲೂಕಿನ ವ್ಯಾಪ್ತಿಯಲ್ಲಿತ್ತು. ಹಾರೂಗೊಪ್ಪ, ಇಂಚಲ, ಹೊಸೂರು ಗ್ರಾಮಗಳು 5 ಕಿ.ಮೀ ವ್ಯಾಪ್ತಿಯಲ್ಲಿದ್ದರೂ ತಾಲೂಕು ಕೇಂದ್ರಕ್ಕೆ 40 ಕಿ.ಮೀ ಪ್ರಯಾಣ ಅನಿವಾರ್ಯವಾಗಿತ್ತು. ಚಚಡಿ ಗ್ರಾಮ 10 ಕಿ.ಮೀ ದೂರದಲ್ಲಿದ್ದರೂ 40 ರಿಂದ 50 ಕಿ.ಮೀ ದೂರದ ಸವದತ್ತಿಗೆ ತೆರಳಬೇಕಾಗುತ್ತಿತ್ತು.
ಸಣ್ಣ ಪ್ರಮಾಣಪತ್ರ, ಜನನ–ಮರಣ ಪ್ರಮಾಣಪತ್ರ, ಆಸ್ತಿ ನೋಂದಣಿ, ಪತ್ರವ್ಯವಹಾರ ಸೇರಿದಂತೆ ಪ್ರತಿಯೊಂದು ಸರ್ಕಾರಿ ಕೆಲಸಕ್ಕೂ ಜನರು ದಿನವಿಡೀ ಪ್ರಯಾಣ ಮಾಡಿ ಸಮಯ ಹಾಗೂ ಹಣ ವ್ಯಯ ಮಾಡಬೇಕಾಗುತ್ತಿತ್ತು. ಈಗ ಈ ಹಳ್ಳಿಗಳನ್ನು ಬೈಲಹೊಂಗಲ ತಾಲ್ಲೂಕಿಗೆ ಸೇರಿಸಿರುವುದರಿಂದ ಕೇವಲ 5 ರಿಂದ 15 ನಿಮಿಷಗಳಲ್ಲಿ ತಾಲೂಕು ಕೇಂದ್ರ ತಲುಪಲು ಸಾಧ್ಯವಾಗಲಿದೆ.



