ಚಿಕ್ಕೋಡಿ: ‘ಕನ್ನಡದ ಸ್ವಾಮೀಜಿ’ ಎಂದೇ ಖ್ಯಾತರಾಗಿದ್ದ ತಾಲ್ಲೂಕಿನ ಚಿಂಚಣಿಯ ಅಲ್ಲಮಪ್ರಭು ಸಿದ್ಧಸಂಸ್ಥಾನ ಮಠದ ಅಲ್ಲಮಪ್ರಭು ಸ್ವಾಮೀಜಿ(63) ಅನಾರೋಗ್ಯದಿಂದ ಭಾನುವಾರ ಬೆಳಗಿನ ಜಾವ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಲಿಂಗೈಕ್ಯರಾದರು.
ಶ್ರೀಗಳು ಧಾರ್ಮಿಕ ಜಾಗೃತಿಯೊಂದಿಗೆ ಗಡಿನಾಡಿನಲ್ಲಿ ನಾಡು-ನುಡಿ ರಕ್ಷಣೆಗಾಗಿ ಹಲವು ರಚನಾತ್ಮಕ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಜನರಲ್ಲಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸಿದ್ದರು. ಗಡಿ ಕನ್ನಡಿಗರ ಬಳಗದಿಂದ ಪ್ರತಿವರ್ಷ ಕರ್ನಾಟಕ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದರು. ನಾಡಿನ ಹೆಸರಾಂತ ಸಾಹಿತಿಗಳು, ವಿದ್ವಾಂಸರು, ಕಲಾವಿದರನ್ನು ಮಠದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಹ್ವಾನಿಸಿ, ಗಡಿ ನೆಲದಲ್ಲಿ ಕನ್ನಡದ ಕಂಪು ಸೂಸಿದ್ದರು.
ಪ್ರತಿವರ್ಷ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡದ ಕೃತಿಗಳನ್ನು ಬಿಡುಗಡೆಗೊಳಿಸುತ್ತಿದ್ದರು. ಈವರೆಗೆ 52 ಮೌಲಿಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಸಮರ್ಪಿಸಿದ ಕೀರ್ತಿ ಅವರದ್ದು. ಕನ್ನಡ ನಾಡಿನ ಸಾಹಿತ್ಯ, ಸಾಂಸ್ಕೃತಿಕ ಲೋಕವನ್ನು ಪ್ರತಿಬಿಂಬಿಸುವ ಸಿರಿಗನ್ನಡ ತೇರು ನಿರ್ಮಿಸಿ, ಇಡೀ ನಾಡಿಗೆ ಮಾದರಿಯಾಗಿದ್ದರು.