ಬೆಂಗಳೂರು : ಕಾಂತರಾಜ್ ಆಯೋಗದ ವರದಿ ಸ್ವೀಕರಿಸಿ ಅದನ್ನು ಸಾರ್ವಜನಿಕಗೊಳಿಸುವಂತೆ ಒತ್ತಾಯಿಸುವುದರ ಜತೆಗೆ ವಿವಿಧ ಬೇಡಿಕೆಗಳ ಈಡೇರಿಕೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಸೋಷಿಯಲ್ ಡೆಮಾಕ್ರಟಿಕ್ ಪಕ್ಷ ಆಯೋಜಿಸಿದ್ದ ಬೆಳಗಾವಿ ಚಲೋ ಕಾರ್ಯಕ್ರಮಕ್ಕೆ ಎಸ್‌ಡಿಪಿಐ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಚಾಲನೆ ನೀಡಿದರು.
ಬೆಂಗಳೂರಿನ ವಿಧಾನ ಸೌಧ ಮುಂದಿರುವ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ ಬಳಿಯಿಂದ ಆರಂಭಗೊಂಡ ಬೆಳಗಾವಿ ಚಲೋ ಕಾರ್ಯಕ್ರಮವು ೬ ದಿನಗಳ ಕಾಲ ರಾಜ್ಯದ ಹತ್ತಾರು ಜಿಲ್ಲೆಗಳಲ್ಲಿ ಸಾಗುತ್ತ ಬೆಳಗಾವಿಯ ಸುವರ್ಣ ಸೌಧ ತಲುಪಲಿದೆ.
ಈ ವೇಳೆ ಎಸ್‌ಡಿಪಿಐ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮಾತನಾಡಿ, ರಾಜ್ಯ ಸರ್ಕಾರ ಈ ಅದಿವೇಶನದಲ್ಲಿ ಕಾಂತರಾಜ್ ಆಯೋಗದ ವರದಿ ಸ್ವೀಕರಿಸಿ ಅದನ್ನು ಸಾರ್ವಜನಿಕಗೊಳಿಸಬೇಕು.
ಎ.ಜೆ. ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಒಕ್ಕೂಟ ಸರಕಾರಕ್ಕೆ ರಾಜ್ಯ ಸರಕಾರ ಶಿಫಾರಸ್ಸು ಮಾಡಬೇಕು. ಮುಸ್ಲಿಮರ ೨ಬಿ ಮೀಸಲಾತಿಯನ್ನು ಮರು ಸ್ಥಾಪಿಸಿ ಶೇಕಡಾ ೮ ಕ್ಕೆ ಏರಿಸಬೇಕು ಎಂದು ಒತ್ತಾಯ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯರಾದ ಅಮ್ಜದ್ ಖಾನ್ ಮತ್ತಿತರರು ಇದ್ದರು.