ಬೆಳಗಾವಿ: ರೋಗಿಯ ಕೈಗೆ ಕೊಳಲು ಕೊಟ್ಟು ಊದಲು ಹೇಳಿ ವೈದ್ಯರು ಮೆದುಳು ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾದ ಘಟನೆ ಕೊಲ್ಲಾಪುರದ ಕನ್ಹೇರಿ ಮಠದ ಸಿದ್ಧಗಿರಿ ಆಸ್ಪತ್ರೆಯಲ್ಲಿ ನಡೆದಿದೆ.
ಕನ್ಹೇರಿ ಮಠದ ನರಶಸ್ತ್ರಚಿಕಿತ್ಸಕ ಡಾ.ಶಿವಶಂಕರ ಮರಜಕ್ಕೆ ಹಾಗೂ ಅರಿವಳಿಕೆ ತಜ್ಞ ಪ್ರಕಾಶ ಭರಮಗೌಡ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಶಿವಶಂಕರ್ ಮರಜಕ್ಕೆ ಅವರು, ಇಸ್ರೇಲ್‌ನಿಂದ ಬಂದಿದ್ದ ರೈತನಿಗೆ ಮೆದುಳಿನಲ್ಲಿ ಗಡ್ಡೆ ಬೆಳೆದಿತ್ತು. ಅದನ್ನು ಟ್ಯೂಮರ್ ಆಪರೇಷನ್ ಮಾಡಿ ಹೊರ ತೆಗೆಯಬೇಕಿತ್ತು. ಈ ಸಂದರ್ಭದಲ್ಲಿ ವೈದ್ಯರು ರೋಗಿಯ ಕೈಗೆ ಕೊಳಲು ಕೊಟ್ಟು ಊದಲು ಹೇಳಿದರು. ಸುಮಾರು 5 ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆ ಸಂಪೂರ್ಣ ಯಶಸ್ವಿಯಾಗಿದೆ ಎಂದರು.
ಹಳ್ಳಿ ಭಾಗದಲ್ಲಿ ಇಂಥ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಮಾಡಿರುವ ದೇಶದ ಕೆಲವೇ ಆಸ್ಪತ್ರೆಗಳಲ್ಲಿ ಇದೂ ಒಂದು. ಬೇರೆ ಕಡೆಗೆ ಇದಕ್ಕೆ 10ರಿಂದ 15 ಲಕ್ಷ ರೂ. ವೆಚ್ಚ ಆಗುತ್ತದೆ. ನಮ್ಮಲ್ಲಿ ಕೇವಲ 1.20 ಲಕ್ಷ ರೂ. ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.
ವೈದ್ಯರ ಸಾಧನೆಗೆ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಶ್ಲಾಘಿಸಿದರು. ಸುದ್ದಿಗೋಷ್ಠಿಯಲ್ಲಿ ಬಸವರಾಜ ಜಗಜಂಪಿ ಇದ್ದರು.