ಬೆಂಗಳೂರು: ಬಳ್ಳಾರಿಯಲ್ಲಿ ಬಿಜೆಪಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹಾಗೂ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಬೆಂಬಲಿಗರ ನಡುವಿನ ಗಲಾಟೆ ಹಾಗೂ ಫೈರಿಂಗ್ ಘಟನೆಯನ್ನು ಸಿಬಿಐ ತನಿಖೆಗೆ ನೀಡುವುದಿಲ್ಲ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತಾಗಿ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಯಾವುದೇ ಪ್ರಕರಣವನ್ನು ಸಿಬಿಐಗೆ ಕೊಡಲ್ಲ ಎಂದು ನಾವು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿದ್ದೇವೆ, ಅದರಂತೆ ನಡೆದುಕೊಳ್ಳುತ್ತೇವೆ ಎಂದಿದ್ದಾರೆ.
ಇನ್ನೂ ಬಳ್ಳಾರಿ ಘಟನೆಯ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ನೀಡಿರುವ ಹೇಳಿಕೆಯ ಕುರಿತಾಗಿ ಪ್ರತಿಕ್ರಿಯೆ ನೀಡಿ, ಕುಮಾರಸ್ವಾಮಿ ಅವರು ಎರಡು ಬಾರಿ ಸಿಎಂ ಆದವರು. ಈಗ ಕೇಂದ್ರ ಕೈಗಾರಿಕಾ ಸಚಿವರು ಆಗಿದ್ದಾರೆ. ಇಂತಹ ಸಂದರ್ಭಗಳಲ್ಲಿ ಹೇಳಿಕೆ ಕೊಟ್ಟಿದ್ದು, ನನ್ನನ್ನು ರಬ್ಬರ್ ಸ್ಟಾಂಪ್ ಎಂದಿದ್ದಾರೆ. ನಾನು ಸಹ ಏನು ಬೇಕಾದರು ಹೇಳಬಹುದು. ಅವರ ಹೇಳಿಕೆ ಸ್ವಾಗತ ಮಾಡುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.
ಇನ್ನೂ ರಾಜ್ಯದಲ್ಲಿ ಹೇಗೆ ಕಾನೂನು ಸುವ್ಯವಸ್ಥೆ ಮಾಡಬೇಕು ಎಂಬ ಅರಿವು ನನಗಿದೆ. ನನ್ನ ಸಾಮರ್ಥ್ಯನೂ ಅವರಿಗೆ ಗೊತ್ತು, ನನ್ನ ವ್ಯಕ್ತಿತ್ವವೂ ಗೊತ್ತು. ನಮ್ಮ ಪೊಲೀಸ್ ಇಲಾಖೆ ಸಮರ್ಥವಾಗಿದೆ ಎಂದು ಹೆಚ್.ಡಿ.ಕೆ ವಿರುದ್ಧ ಕಿಡಿಕಾರಿದ್ದಾರೆ.
ಇಂತಹ ಸಂದರ್ಭಗಳಲ್ಲಿ ಕುಮಾರಸ್ವಾಮಿ ಕೇಂದ್ರದ ಮಂತ್ರಿ ಆಗಿದ್ದಾರೆ. ನಾನು ಏನು ಬೇಕಾದರೂ ಹೇಳಿಕೆ ಕೊಡಬಹುದು. ಆದರೆ ಅವರು ಜವಾಬ್ದಾರಿಯಿಂದ ಹೇಳಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅದನ್ನ ನಾನು ಸ್ವೀಕಾರ ಮಾಡುತ್ತೇನೆ ಎಂದಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಆಡಳಿತ ಮಾಡಬೇಕು ಎಂಬ ಅರಿವು ನನಗಿದೆ. 38 ವರ್ಷದಿಂದ ರಾಜಕಾರಣದಲ್ಲಿ ಇದ್ದೇನೆ. ಹಾಗಾಗಿ ಕುಮಾರಸ್ವಾಮಿ ಅವರ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.



