Monday, January 12, 2026
Google search engine

Homeರಾಜ್ಯ‌ಬಳ್ಳಾರಿ ಬ್ಯಾನರ್‌ ಗಲಭೆ; ಜನಾರ್ದನ ರೆಡ್ಡಿ ಪರ ನಿಂತ ಬಿಜೆಪಿ ಹೈಕಮಾಂಡ್

‌ಬಳ್ಳಾರಿ ಬ್ಯಾನರ್‌ ಗಲಭೆ; ಜನಾರ್ದನ ರೆಡ್ಡಿ ಪರ ನಿಂತ ಬಿಜೆಪಿ ಹೈಕಮಾಂಡ್

ಬೆಂಗಳೂರು : ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಭೆಗೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಾಧ್ಯಕ್ಷ ನಿತಿನ್ ನಬಿನ್ ಅವರಿಗೆ ಮಾಹಿತಿ ತಲುಪಿದ್ದು, ಈ ಪ್ರಕರಣದ ಕುರಿತು ಅವರು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ದೂರವಾಣಿ ಮೂಲಕ ಕರೆ ಮಾಡಿ ಮಾತನಾಡಿದ್ದು, ಈ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಅಲ್ಲದೆ, ಇದು ಗಂಭೀರ ವಿಚಾರವಾಗಿದ್ದು ಹೈಕಮಾಂಡ್ ನಿಮ್ಮ ಜತೆಗಿರಲಿದೆ ಎಂದು ಅಭಯ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಜರ್ನಾದನ ರೆಡ್ಡಿ ಜೊತೆ ಮಾತನಾಡಿದ ನಿತಿನ್ ನಬಿನ್, ಈ ಪ್ರಕರಣ ಅತ್ಯಂತ ಗಂಭೀರವಾದದ್ದಾಗಿದ್ದು, ಯಾವುದೇ ರೀತಿಯ ಹೋರಾಟ ನಡೆಸಲು ಬಿಜೆಪಿ ರಾಷ್ಟ್ರೀಯ ನಾಯಕತ್ವದ ಸಂಪೂರ್ಣ ಬೆಂಬಲ ಇದೆ ಎಂದು ಭರವಸೆ ನೀಡಿದ್ದಾರೆ. ಅಗತ್ಯವಿದ್ದಲ್ಲಿ ಈ ವಿಷಯವನ್ನು ರಾಷ್ಟ್ರೀಯ ಮಟ್ಟದಲ್ಲೂ ಪ್ರಸ್ತಾಪ ಮಾಡಲಾಗುವುದು ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಅಲ್ಲದೆ ಪಾದಯಾತ್ರೆ ಸೇರಿದಂತೆ ಹೋರಾಟದ ರೂಪುರೇಷೆಗಳ ಕುರಿತು ರಾಜ್ಯ ನಾಯಕರೊಂದಿಗೆ ಚರ್ಚೆ ನಡೆಸುವಂತೆ ಜನಾರ್ದನ ರೆಡ್ಡಿಗೆ ನಿತಿನ್ ನಬಿನ್ ಸೂಚನೆ ನೀಡಿದ್ದು, ಈ ಹಿನ್ನೆಲೆ ರೆಡ್ಡಿ ಹಾಗೂ ಮಾಜಿ ಸಚಿವ ಬಿ. ಶ್ರೀರಾಮುಲು ಬಳ್ಳಾರಿ ಪಾದಯಾತ್ರೆ ನಡೆಸುವ ಬಗ್ಗೆ ಒಲವು ತೋರಿದ್ದಾರೆ ಎನ್ನಲಾಗಿದೆ.

ಬಳ್ಳಾರಿ ಪಾದಯಾತ್ರೆಯ ಕುರಿತು ಇಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೊಂದಿಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಪಾದಯಾತ್ರೆಯ ರೂಪುರೇಷೆಗಳ ಕುರಿತು ಶ್ರೀರಾಮುಲು ಮತ್ತು ವಿಜಯೇಂದ್ರ ನಡುವೆ ಪ್ರತ್ಯೇಕ ಸಭೆ ನಡೆಯಲಿದೆ ಎಂದು ತಿಳಿದುಬಂದಿದೆ.

ಈ ಹಿಂದೆ ವಾಲ್ಮೀಕಿ ನಿಗಮ ಹಗರಣ ನಡೆದಿದ್ದು, ಇದೀಗ ವಾಲ್ಮೀಕಿ ಪುತ್ಥಳಿ ಸಂಬಂಧ ಗಲಾಟೆ ನಡೆದಿರುವುದನ್ನು ಉಲ್ಲೇಖಿಸಿರುವ ಬಿಜೆಪಿ ನಾಯಕರು, ವಾಲ್ಮೀಕಿ ಸಮುದಾಯವನ್ನು ಗುರಿಯಾಗಿಸಿಕೊಂಡು ದಾಳಿ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

ಈ ವಿಚಾರವನ್ನು ಮುಂದಿಟ್ಟುಕೊಂಡು ಸಮುದಾಯದ ಪರವಾಗಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿದ್ದು, ಗಲಭೆ ವಿರುದ್ಧದ ಹೋರಾಟದಲ್ಲಿ ರೆಡ್ಡಿ, ರಾಮುಲು ನಡುವೆ ಭಿನ್ನಾಭಿಪ್ರಾಯ ಇದೆ ಎನ್ನಲಾಗಿತ್ತು. ಗಲಭೆ ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಲು ಜನಾರ್ದನ ರೆಡ್ಡಿ ಪ್ಲ್ಯಾನ್​ ಮಾಡಿದ್ದರೆ, ಈ ವಿಚಾರವನ್ನು ಇಟ್ಟುಕೊಂಡು ಪಾದಯಾತ್ರೆಗೆ ಶ್ರೀರಾಮುಲು ಚಿಂತನೆ ನಡೆಸಿದ್ದರು. ಇದರಿಂದ ರಾಜ್ಯ ಬಿಜೆಪಿ ನಾಯಕರು ಪೇಚಿಗೆ ಸಿಲುಕಿದ್ದರು ಎನ್ನಲಾಗಿತ್ತು. ಆದರೆ, ಇದೀಗ ಪಾದಯಾತ್ರೆ ಬಗ್ಗೆ ಮಾತುಕತೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಒಟ್ಟಿನಲ್ಲಿ ಬಳ್ಳಾರಿ ಗಲಭೆ ವಿಚಾರದಲ್ಲಿ ಬಿಜೆಪಿ ರಾಜ್ಯ ಹಾಗೂ ರಾಷ್ಟ್ರೀಯ ನಾಯಕತ್ವ ಸಕ್ರಿಯಗೊಂಡಿದ್ದು, ಮುಂದಿನ ಹೋರಾಟದ ತಂತ್ರದ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ ಎನ್ನಲಾಗಿದೆ.

RELATED ARTICLES
- Advertisment -
Google search engine

Most Popular