ಬೆಂಗಳೂರು: ಬಳ್ಳಾರಿ ಹಿಂಸಾಚಾರ ಪ್ರಕರಣವನ್ನು ಸಿಬಿಐಗೆ ವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಏಕೆ ಹಿಂದೇಟು ಹಾಕುತ್ತಿದ್ದಾರೆ ಮತ್ತು ಅದನ್ನು ಸಿಐಡಿಗೆ ಒಪ್ಪಿಸಲು ಕಾರಣವೇನು ಎಂದು ಮಾಜಿ ಸಚಿವ, ಗಂಗಾವತಿ ಬಿಜೆಪಿ ಶಾಸಕ ಜಿ.ಜನಾರ್ದನ ರೆಡ್ಡಿ ಪ್ರಶ್ನಿಸಿದ್ದು, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಉದ್ದೇಶಪೂರ್ವಕವಾಗಿ ವಿಷಯವನ್ನು ಬೇರೆಡೆಗೆ ತಿರುಗಿಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ಹಿಂದೆ ಸಿಎಂ ಆಗಿದ್ದಾಗ ಏಳು ಪ್ರಕರಣಗಳನ್ನು ಸಿಬಿಐಗೆ ಹಸ್ತಾಂತರಿಸಿದ್ದನ್ನು ನೆನಪಿಸಿದ ಅವರು ಬಳ್ಳಾರಿ ಪ್ರಕರಣದಲ್ಲಿ ಈಗ ಯಾಕೆ ಹಿಂಜರಿಕೆ? ಕೊಲೆ, ಕೊಲೆ ಯತ್ನ ಸೇರಿದಂತೆ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದರೂ ಶಾಸಕ ನಾರಾ ಭರತ್ ರೆಡ್ಡಿ ಅವರನ್ನು ರಕ್ಷಿಸಲು ಕಾಂಗ್ರೆಸ್ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ದೂರಿದರು.
ಇದೇ ವೇಳೆ ಬಳ್ಳಾರಿಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಕೈಗೊಳ್ಳಲು ಬಿ ಶ್ರೀರಾಮುಲು ಅವರಿಗೆ ಬಿಜೆಪಿ ನಾಯಕತ್ವ ಗ್ರೀನ್ ಸಿಗ್ನಲ್ ನೀಡಲಿದೆ ಎಂದು ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು. ಶಿವಮೊಗ್ಗದಲ್ಲಿ ವಾಲ್ಮೀಕಿ ನಿಗಮದ ಅವ್ಯವಹಾರ ಸೇರಿದಂತೆ ವಾಲ್ಮೀಕಿ ಸಮುದಾಯದ ಹೆಸರಿನಲ್ಲಿ ನಡೆದ ಅನ್ಯಾಯ, ಹಿಂಸಾಚಾರವನ್ನು ಖಂಡಿಸಿ ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.



