ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಇಂದು ರಾಜ್ಯ ಅರಣ್ಯ ಇಲಾಖೆ ವತಿಯಿಂದ ನೀಲಗಿರಿ ಜಿಲ್ಲೆಯ ತೆಪ್ಪಕ್ಕಾಡ್ ಆನೆ ಶಿಬಿರದಲ್ಲಿ ಮೊದಲ ಮಹಿಳಾ ಕಾವಾಡಿ ಆಗಿ ನೇಮಕಗೊಂಡಿರುವ ವಿ ಬೆಳ್ಳಿಯವರಿಗೆ ನೇಮಕಾತಿ ಆದೇಶ ಹೊರಡಿಸಿದ್ದಾರೆ. ನೇಮಕಾತಿಗೆ ಪ್ರತಿಕ್ರಿಯೆಯಾಗಿ, ಪರಿಸರ ಹವಾಮಾನ ಬದಲಾವಣೆ ಮತ್ತು ಅರಣ್ಯಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಪ್ರಿಯಾ ಸಾಹು, ಆಸ್ಕರ್ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ ದಿ ಎಲಿಫೆಂಟ್ ವಿಸ್ಪರರ್ಸ್ ಖ್ಯಾತಿಯ ಬೆಳ್ಳಿ ಸರ್ಕಾರದಿಂದ ಕಾಯಂ ಮಹಿಳಾ ಕಾವಾಡಿ ಆಗಿ ನೇಮಕಗೊಂಡ ಮೊದಲ ಮಹಿಳೆಯಾಗಿದ್ದಾರೆ ಎಂದು ಹೇಳಿದ್ದಾರೆ.
ತಮಿಳುನಾಡು, ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರದಲ್ಲಿ ಆನೆ ಮರಿಗಳನ್ನು ಉಳಿಸುವಲ್ಲಿ ಬೊಮ್ಮನ್ ಮತ್ತು ಬೆಳ್ಳಿ ಅವರ ಸೇವೆ ನಿಸ್ವಾರ್ಥ ಮತ್ತು ಸಮರ್ಪಿತ ವಾಗಿದ್ದು ಇತರರಿಗೆ ಸ್ಪೂರ್ತಿಯಾಗಿದೆ. ಅವರು ನಿಜವಾಗಿಯೂ ಅರ್ಹರಾಗಿರುವ ಈ ಮನ್ನಣೆಗಾಗಿ ಸಿಎಂ ಸ್ಟಾಲಿನ್ ಅವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.
ಸ್ಟಾಲಿನ್ ಅವರು ಆನೆ ಪಾಲಕ ದಂಪತಿಗಳಾದ ಬೊಮ್ಮನ್ ಮತ್ತು ಬೆಳ್ಳಿ ಅವರನ್ನು ಅಭಿನಂದಿಸಿದ್ದಾರೆ. ‘ದಿ ಎಲಿಫೆಂಟ್ ವಿಸ್ಪರೆರ್ಸ್’ ಸಾಕ್ಷ್ಯಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿ ಗೆದ್ದ ನಂತರ ಈ ದಂಪತಿಗೆ ತಲಾ 1 ಲಕ್ಷ ಚೆಕ್ ಅನ್ನು ಉಡುಗೊರೆಯಾಗಿ ಸ್ಟಾಲಿನ್ ನೀಡಿದ್ದರು. ಈ ಸಾಕ್ಷ್ಯಚಿತ್ರವು ಆನೆ ಮರಿ ಅಮ್ಮು ಮತ್ತು ರಘುವನ್ನು ಪೋಷಿಸುವ ಅರಣ್ಯವಾಸಿ ಸಮುದಾಯಕ್ಕೆ ಸೇರಿದ ಬೊಮ್ಮನ್ ಮತ್ತು ಬೆಳ್ಳಿಯ ಜೀವನ ಮತ್ತು ಕೆಲಸವನ್ನು ಆಧರಿಸಿದೆ.