ಬೆಳ್ತಂಗಡಿ : ಪೊಲೀಸರಿಗೆ ಬೆದರಿಕೆ ಹಾಕಿರುವ ಆರೋಪಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಪ್ರಕರಣ ದಾಖಲಾಗಿರುವುದರಿಂದ ಶಾಸಕರ ಗರ್ಡಾಡಿ ಮನೆಗೆ ಪೊಲೀಸ್ ತಂಡ ಆಗಮಿಸಿದೆ.
ಮೇ.೧೮ ರಂದು ಅಕ್ರಮ ಕಲ್ಲು ಕೋರೆ ಗಣಿಗಾರಿಕೆಗೆ ಸಂಬಂಧಿಸಿದಂತೆ ಬಿಜೆಪಿ ಮುಖಂಡನನ್ನು ಬಂಧಿಸಿರುವುದನ್ನು ಖಂಡಿಸಿ ಹರೀಶ್ ಪೂಂಜ ಕಾರ್ಯಕರ್ತರೊಂದಿಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮಧ್ಯರಾತ್ರಿ ಪ್ರತಿಭಟಿಸಿ ಪೊಲೀಸರನ್ನು ನಿಂದಿಸಿದ್ದಾರೆ ಎನ್ನಲಾಗಿದೆ. ಈ ವಿಚಾರವಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ಮೇ.೨೦ ರಂದು ತಾಲೂಕು ಆಡಳಿತದ ಮುಂದೆ ಪ್ರತಿಭಟನೆ ನಡೆಸಿ ಮತ್ತೆ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆಂದು ಎರಡನೇ ಪ್ರಕರಣ ದಾಖಲಿಸಲಾಗಿತ್ತು.
ಇದೀಗ ಬೆಳ್ತಂಗಡಿ ಪೊಲೀಸರ ತಂಡ ಶಾಸಕರ ಮನೆಯೊಳಗಿದ್ದು, ಯಾವುದೇ ಸಮಯದಲ್ಲಿ ಶಾಸಕರನ್ನು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹರೀಶ್ ಪೂಂಜಾರ ಮನೆಗೆ ಪೊಲೀಸರು ಆಗಮಿಸಿರುವ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಮನೆ ಮುಂಭಾಗದಲ್ಲಿ ಜಮಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಹೆಚ್ಚಿನ ಪೊಲೀಸರನ್ನು ಕರೆಸಲಾಗಿದೆ. ಬೆಳ್ತಂಗಡಿ ನಗರದಲ್ಲೂ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.