ಹದಗೆಟ್ಟ ರಸ್ತೆ, ಗುಂಡಿ-ಕೆಸರು; ಅಧಿಕಾರಿಗಳಿಗೆ ಸಾರ್ವಜನಿಕರ ಮನವಿ
ಮಂಗಳೂರು (ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಕ್ಷೇತ್ರದ ವ್ಯಾಪ್ತಿಗೊಳಪಟ್ಟ ಉರುವಾಳು ಗ್ರಾಮ ಪಂಚಾಯತ್ ನ ಅಧೀನದಲ್ಲಿ ಬರುವ ಮುರಿಯಾಲ ಎಂಬಲ್ಲಿನ ರಸ್ತೆ ತೀರಾ ಹದಗೆಟ್ಟಿದೆ.
ಹೀಗಾಗಿ ಸ್ಥಳೀಯರು ನಡೆದಾಡಲು ದಾರಿ ಇಲ್ಲದೇ ಪರದಾಡುವಂತಾಗಿದೆ. ಈ ಪ್ರದೇಶದಲ್ಲಿ ಸುಮಾರು 700 ಮಂದಿ ವಾಸಿಸುತ್ತಿದ್ದು ರಸ್ತೆ ಇಲ್ಲದ ಕಾರಣ ತುಂಬಾ ಸಂಕಷ್ಟವನ್ನು ಅನುಭವಿಸುವಂತಾಗಿದೆ. ಸದ್ಯ ಈಗ ಮಳೆ ಜೋರಾಗಿದ್ದರಿಂದ ರಸ್ತೆಯ ಸ್ಥಿತಿ ತೀರಾ ದಯನೀಯವಾಗಿದೆ.

ಅತ್ತ ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಕರಾಯದಿಂದ ಕಾರಿಂಜ, ಇಳಂತಿಲಕ್ಕೆ ಹೋಗುವ ರಸ್ತೆ ಕೂಡಾ ಸಂಪೂರ್ಣ ಹದಗೆಟ್ಟಿದೆ. ಪ್ರತಿದಿನ ಈ ರಸ್ತೆಯಲ್ಲಿ ವಿದ್ಯಾರ್ಥಿಗಳು ಸೇರಿ ಸಾವಿರಾರು ಮಂದಿ ಸಂಚರಿಸುತ್ತಾರೆ. ಈ ರಸ್ತೆಯಲ್ಲಿ ಸಾವಿರಾರು ಗುಂಡಿಗಳಿದ್ದು ಕೆಸರು ತುಂಬಿಕೊಂಡು ರಸ್ತೆ ಹದಗೆಟ್ಟಿದೆ. ಹೀಗಾಗಿ ಈ ರಸ್ತೆಯನ್ನು ಕೂಡಲೇ ಸಂಬಂಧಿಸಿದ ಅಧಿಕಾರಿಗಳು ದುರಸ್ತಿ ಮಾಡಬೇಕೆಂದು ಮಾಧ್ಯಮದ ಮೂಲಕ ಸಾರ್ವಜನಿಕರು ಮನವಿ ಮಾಡಿದ್ದಾರೆ.