ಚಾಮರಾಜನಗರ: ಬೇಂದ್ರೆಯವರು ಕನ್ನಡ ನಾಡಿನ ಅದ್ಭುತ ಪ್ರತಿಭೆ. ಬೇಂದ್ರೆಯವರ ಸಾಹಿತ್ಯ ಚಿಂತನೆಗಳು ಕನ್ನಡವನ್ನು ಶ್ರೀಮಂತಗೊಳಿಸಿ ವಿಶ್ವಖ್ಯಾತಿಯನ್ನು ತಂದುಕೊಟ್ಟಿದೆ. ಕನ್ನಡದ ಜನರನ್ನು ತಮ್ಮ ಕವನಗಳ ಮೂಲಕ ಮನಸೂರೆಗೊಂಡಿದ್ದಾರೆ. ಅವರ ಕವನಗಳನ್ನು ಗಾಯಕರು ಮತ್ತಷ್ಟು ವಿಶ್ವ ಪ್ರಸಿದ್ಧಿ ಮಾಡಿದ್ದಾರೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ ಎನ್ ಋಗ್ವೇದಿ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆದ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಜನ್ಮದಿನದ ಸಮಾರಂಭದಲ್ಲಿ ಮಾತನಾಡುತ್ತಾ ವರಕವಿ ,ವಿಶ್ವಕವಿ, ಶಬ್ದ ಗಾರುಡಿಗ ಕನ್ನಡ ಸಾಹಿತ್ಯದ ಮೇರು ವ್ಯಕ್ತಿತ್ವದ, ಸರಳ ಸಜ್ಜನಿಕೆಯ, ದೇಶ ಪ್ರೇಮದ ಸಾಹಿತಿ ಬೇಂದ್ರೆಯವರನ್ನು ನೆನೆಯುವುದೇ ಪುಣ್ಯ. ಅವರ ಸಾಹಿತ್ಯ, ಕವನಗಳು, ನಾಟಕಗಳು, ವಿಮರ್ಶೆಗಳು , ಜನಸಾಮಾನ್ಯರನ್ನು ತಲುಪಿ ವಿಶ್ವಪ್ರಸಿದ್ಧವಾಗಿದೆ. ಸ್ವಾತಂತ್ರ್ಯ ಚಳುವಳಿಯ ಅವರ ನರಬಲಿ ಕವನ ಬ್ರಿಟಿಷ್ ಸರ್ಕಾರದ ಕೋಪಕ್ಕೆ ಕಾರಣವಾಗಿತ್ತು. ಸೆರೆಮನೆ ವಾಸ ಅನುಭವಿಸಿದ ಕನ್ನಡದ ಸಾಹಿತಿ ಬೇಂದ್ರೆಯವರು ಅತ್ಯುತ್ತಮ ವಾಗ್ಮಿಗಳು ಆಗಿದ್ದವರು. ಅವರ ಚಿಂತನೆಗಳು ಆಧ್ಯಾತ್ಮಿಕತೆ, ಶಾಸ್ತ್ರೀಯ ,ಗ್ರಾಮೀಣ, ಜನಪದ ಹಾಗೂ ಸಾಮಾನ್ಯರ ಆಡು ಭಾಷೆಯ ನುಡಿಗಟ್ಟುಗಳ ಮೂಲಕ ಇಂದಿಗೂ ಜನಪ್ರಿಯವಾಗಿರುವುದನ್ನು ಕಾಣಬಹುದು . ಕನ್ನಡದ ಟಾಗೋರ್ ಎಂದೇ ಪ್ರಸಿದ್ಧಿಯಾಗಿದ್ದ ಬೇಂದ್ರೆಯವರ ನಾಡಿನ ಪ್ರೇಮ ಸಾಹಿತ್ಯ ರಚನೆ ಯುವಕರಿಗೆ ಆದರ್ಶವೆಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕಿಶೋರ್ ಕುಮಾರ್ ಮಾತನಾಡಿ ದರಾಬೇಂದ್ರೆ ಅವರು ಕನ್ನಡ ಭಾಷೆಯ ಜೊತೆಗೆ ಹಲವಾರು ಭಾಷೆಗಳಲ್ಲಿ ಪಾಂಡಿತ್ಯವನ್ನು ಹೊಂದಿ ,ಅರವಿಂದ ಮಹರ್ಷಿಗಳ ಪ್ರಭಾವದಿಂದ ಅವರ ಸಾಹಿತ್ಯದ ರಚನೆ ದೇಶಿಯ ಪ್ರಜ್ಞೆಯನ್ನು ಹೆಚ್ಚಿಸಿತ್ತು. ಬೇಂದ್ರೆಯವರ ಸಂಸ್ಕೃತ ,ಮರಾಠಿ ಮತ್ತು ಕನ್ನಡದ ಭಾಷೆಗಳ ಹಿಡಿತ ಅವರಗೆ ಕನ್ನಡದ ಸಾಹಿತ್ಯದಲ್ಲಿ ಸಮಗ್ರವಾದ ಸಾಹಿತ್ಯವನ್ನು ರಚಿಸಲು ಸಾಧ್ಯವಾಯಿತು ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕ ರವಿಚಂದ್ರ ಪ್ರಸಾದ್ ರವರು ಬೇಂದ್ರೆಯವರ ವ್ಯಕ್ತಿತ್ವ ಕುರಿತು ಪ್ರಾಸ್ತಾವಿಕವಾಗಿ ವಿವರಿಸಿದರು. ಬೇಂದ್ರೆ ಅವರ ಕವನಗಳು ಸಾವಿರಾರು ಗಾಯಕರಿಗೆ ಇಂದಿಗೂ ಶಕ್ತಿಯಾಗಿ ಅವರ ಕವನ ಗಾಯನದ ಮೂಲಕ ಸಂತೃಪ್ತಿ ಭಾವನೆಯನ್ನು ಮನಸ್ಸಿಗೆ ನೆಮ್ಮದಿಯನ್ನು ತಂದು ಕೊಡುತ್ತಿದ್ದಾರೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಬಿ ಕೆ ಆರಾಧ್ಯ ,ವೆಂಕಟೇಶ್ ಬಾಬು, ಸುರೇಶ್ ಗೌಡ, ಬೊಮ್ಮಾಯಿ ತಾಂಡವಮೂರ್ತಿ, ಮುಂತಾದವರು ಉಪಸ್ಥಿತರಿದ್ದರು.