ಮೈಸೂರು: ಉನ್ನತ ವ್ಯಾಸಂಗದ ಸಂದರ್ಭದಲ್ಲಿ ಅದರ ಒಂದು ಭಾಗವಾಗಿ ನಿಯೋಜಿತ ಕಾರ್ಯವಿದ್ದು, ಇದರ ತಯಾರಿ ನಡೆಸಲು ಸಾಕಷ್ಟು ಪುಸ್ತಕ ಓದುವುದರ ಜತೆಗೆ, ಈ ವಿಷಯಗಳಲ್ಲಿ ಪರಿಣಿತರಾದ ವಿದ್ವಾಂಸರನ್ನು, ವಿಷಯ ತಜ್ಞರನ್ನು ಕರೆಸಿ ಉಪನ್ಯಾಸ ನೀಡುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ ಅಭಿಪ್ರಾಯಪಟ್ಟರು.
ನಗರದ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ಎಂ.ಕಾಂ.ಸ್ನಾತಕೊತ್ತರ ಅಧ್ಯಯನ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶೇಷ ಉಪನ್ಯಾಸ ನೀಡಿದ ಮಂಡ್ಯ ವಿವಿಯ ಸಹಾಯಕ ಪ್ರಾಧ್ಯಾಪಕಿ ಡಾ.ದಿಲ್‌ಷಾದ್ ಬೇಗಂ ಮಾತನಾಡಿ, ಸ್ನಾತಕೋತ್ತರ ಅಧ್ಯಯನದ ೪ನೇ ಚಾತುರ್ಮಾಸದಲ್ಲಿ ರಿಸರ್ಚ್ ಪ್ರಾಜೆಕ್ಟ್ ನಿಯೋಜಿತ ಕಾರ್ಯವನ್ನು ವಿವಿಯು ಅಳವಡಿಸಿದ್ದು, ವಿದ್ಯಾರ್ಥಿಗಳು ಕ್ರಿಯಾಶೀಲರಾಗಿ ವಿಷಯದ ಬಗ್ಗೆ ಆಳವಾಗಿ ಅಧ್ಯಯನ ನಡೆಸುವ ಮೂಲಕ ವಿಷಯವನ್ನು ವಿಸ್ತೃತವಾಗಿ ಅಭ್ಯಸಿಸುವ ಮೂಲಕ ಆ ವಿಷಯದ ಬಗ್ಗೆ ಹಲವಾರು ಮಾಹಿತಿಗಳನ್ನು ಕಲೆಹಾಕಿ ಅದನ್ನು ಪ್ರಬಂಧದ ರೂಪದಲ್ಲಿ ಮಂಡಿಸುವ ಕಲೆಯನ್ನು ಕರಗತಮಾಡಿಕೊಳ್ಳಲು ಸಹಾಯವಾಗುತ್ತದೆ ಎಂದರು.
ವಿದ್ಯಾರ್ಥಿಗಳು ಈ ವಿಷಯದ ಬಗ್ಗೆ ಯಾವುದೆ ಭಯಪಡದೆ ಆಯ್ಕೆ ಮಾಡಿಕೊಂಡ ವಿಷಯದ ಬಗ್ಗೆ ಸರಿಯಾದ ಮಾಹಿತಿಯನ್ನು ಸಂಗ್ರಹಿಸಿ ವ್ಯವಸ್ಥಿತ ರೀತಿಯಲ್ಲಿ ಪ್ರಸ್ತುತ ಪಡಿಸುವ ಬಗ್ಗೆ ಮಾಹಿತಿಯನ್ನು ಬಹಳ ಸರಳವಾಗಿ ಮತ್ತು ಅರ್ಥಪೂರ್ಣವಾಗಿ ತಿಳಿಸಿಕೊಟ್ಟರು.
ಪ್ರಾಂಶುಪಾಲೆ ಡಾ.ಶಾರದ, ಪ್ರಾಧ್ಯಾಪಕರಾದ ಡಾ.ಎಚ್.ಎಸ್.ಶ್ರೀಕಾಂತ್, ಡಾ.ಪವನ್, ಎಸ್.ಲಕ್ಷ್ಮೀ, ಪ್ರಭಾ, ಭವ್ಯಾ ಸೇರಿದಂತೆ ಹಲವರು ಇದ್ದರು.