ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೊಟ್ಟಮೊದಲ ಬಾರಿಗೆ ನಡೆಯುತ್ತಿರುವ ಕಂಬಳ ಸ್ಪರ್ಧಗೆ ಅಭೂತಪೂರ್ವ ಬೆಂಬಲ ದೊರೆತ್ತಿದ್ದು, 200ಕ್ಕೂ ಅಧಿಕ ಕೋಣಗಳು ಈ ಉತ್ಸವದಲ್ಲಿ ಭಾಗಿಯಾಗಿರುವುದು ಕಾರ್ಯಕ್ರಮದ ಮೆರುಗನ್ನು ಮತ್ತಷ್ಟು ಹೆಚ್ಚಿಸಿದೆ. ಸಾರ್ವಜನಿಕರು ಕೋಣದ ಓಟ, ಕರಾವಳಿ ಶೈಲಿಯ ತಿಂಡಿ-ತಿನಿಸುಗಳನ್ನು ಸವಿದು ಸಂಭ್ರಮಿಸಿದ್ದಾರೆ. ಇನ್ನು ಕಾಂತಾರ ಚಿತ್ರದಲ್ಲಿ ರಿಷಬ್ ಶೆಟ್ಟಿ ಓಡಿಸಿದ್ದ ಕೋಣಗಳು ಈ ಬೆಂಗಳೂರು ಕಂಬಳದಲ್ಲಿ ಕನೆಹಲಗೆ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ಬೀಗಿವೆ.
ಕಣಹಲಗೆಯ ನಾಲ್ಕಾನೇ ರೌಂಡ್ ನಲ್ಲಿ ಆರುವರೆ ಅಡಿ ನೀರು ಚಿಮ್ಮಿಸುವ ಮೂಲಕ ಅಪ್ಪು-ಕಿಟ್ಟು ಎಂಬ ಕೋಣಗಳು ಭರ್ಜರಿ ಗೆಲುವು ಸಾಧಿಸಿವೆ. ಉಡುಪಿ ಜಿಲ್ಲೆಯ ಬೈಂದೂರು ನಿವಾಸಿಯಾದ ಪರಮೇಶ್ವರ್ ಭಟ್ ಅವರು ಅಪ್ಪು-ಕಿಟ್ಟು ಕೋಣಗಳ ಮಾಲೀಕರಾಗಿದ್ದು, ಇದೀಗ ತಮ್ಮ ಕೋಣಗಳು ಬೆಂಗಳೂರು ಕಂಬಳದಲ್ಲಿ ಗೆಲುವು ಸಾಧಿಸಿರುವುದಕ್ಕೆ ಫುಲ್ ಖುಷ್ ಆಗಿದ್ದಾರೆ. ಬೆಂಗಳೂರು ಕಂಬಳ ಸ್ಪರ್ಧೆಯಲ್ಲಿ ಅಪ್ಪು ಮತ್ತು ಕಿಟ್ಟು ಪದಕಗಳನ್ನು ಗೆಲ್ಲುತ್ತಿದ್ದಂತೆ ಡಿಮ್ಯಾಂಡ್ ಹೆಚ್ಚಾಗಿದ್ದು, ಅವುಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಜನರು ಮುಗಿಬಿದ್ದಿದ್ದಾರೆ.
ಕಾಂತಾರ ಸಿನಿಮಾ ಕೋಣಗಳಾಗಿರುವುದರಿಂದ ಜನರು ನೋಡಲು ಮುಗಿಬೀಳುತ್ತಿದ್ದು, ಮಂಗಳೂರು ಸೇರಿದಂತೆ ಬೆಂಗಳೂರಿಗರು ಬಂದು ಪೋಟೋ ತೆಗೆಸಿಕೊಳ್ಳುತ್ತಿದ್ದಾರೆ.ಇನ್ನು ಕೋಣಗಳನ್ನು ಓಡಿಸಿದ ರಾಘವೇಂದ್ರ ಪೂಜಾರಿ ಮಾತನಾಡಿ, ನಮ್ಮ ಕಿಟ್ಟು – ಅಪ್ಪು ಎದುರಾಳಿ ಕೋಣಗಳಿಗೆ ಓಡುವುದರಲ್ಲಿ ಫೈಟ್ ಕೊಡುತ್ತವೆ. ಇದರಿಂದಲೇ ನಾವು ಗೆದ್ದಿದ್ದೇವೆ. ಇಷ್ಟು ದೊಡ್ಡ ಕಂಬಳದಲ್ಲಿ ಭಾಗವಹಿಸಿ ಪದಕ ಗೆದ್ದಿರುವುದು ಖುಷಿ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇದೇ ಅಪ್ಪು ಮತ್ತು ಕಿಟ್ಟು ಎನ್ನುವ ಕೋಣಗಳನ್ನು ರಿಷಬ್ ಶೆಟ್ಟಿ ಅವರು ತಮ್ಮ ಕಾಂತಾರ ಸಿನಿಮಾದಲ್ಲಿ ಆಯೋಜಿಸಲಾಗಿದ್ದ ಕಂಬಳದಲ್ಲಿ ಓಡಿಸಿದ್ದರು.
