ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇಳಿ ಬಂದಿದ್ದ ಮುಡಾ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ “ಬಿ” ವರದಿಗೆ ಜಾರಿ ನಿರ್ದೇಶನಾಲಯ (ಇ.ಡಿ.) ತಕರಾರು ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ, ಈ ಅರ್ಜಿ ಕುರಿತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು (ಮಂಗಳವಾರ) ತೀರ್ಪು ಪ್ರಕಟಿಸಲಿದೆ.
ಲೋಕಾಯುಕ್ತ ತನಿಖೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಸಾಕ್ಷ್ಯಾಧಾರಗಳು ಇಲ್ಲವೆಂದು ಹೇಳಿ “ಬಿ” ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಈ ವರದಿಗೆ ಇ.ಡಿ. ತೀವ್ರ ಆಕ್ಷೇಪ ವ್ಯಕ್ತಪಡಿಸಿ ತಕರಾರು ಅರ್ಜಿ ಸಲ್ಲಿಸಿತ್ತು. ನ್ಯಾಯಾಲಯವು ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡು, ತೀರ್ಪನ್ನು ಏಪ್ರಿಲ್ 15ಕ್ಕೆ ಕಾಯ್ದಿರಿಸಿತ್ತು.
ಈ ಸಂಬಂಧ ಇ.ಡಿ. ಪರ ವಕೀಲ ಮಧುಕರ್ ದೇಶಪಾಂಡೆ ಹಾಗೂ ಲೋಕಾಯುಕ್ತ ಪರ ವಕೀಲ ವೆಂಕಟೇಶ್ ಅರಬಟ್ಟಿ ನ್ಯಾಯಾಲಯದಲ್ಲಿ ವಾದ ಮಂಡಿಸಿದರು. ಇ.ಡಿ. ಪರ ವಕೀಲ ದೇಶಪಾಂಡೆ, ಪಿಎಂಎಲ್‌ಎ ಕಾಯ್ದೆಯ 66(2) ಅಡಿ ಇ.ಡಿ. ಕೂಡ ಶಾಸನಬದ್ಧ ಮಾಹಿತಿದಾರನಾಗಿದ್ದು, ಬಿ ವರದಿಗೆ ತಕರಾರು ಅರ್ಜಿ ಸಲ್ಲಿಸಲು ನ್ಯಾಯಸಮ್ಮತ ಹಕ್ಕು ಹೊಂದಿದೆ ಎಂದರು.
ವಿರುದ್ಧವಾಗಿ, ವೆಂಕಟೇಶ್ ಅರಬಟ್ಟಿ ಅವರು, ಇ.ಡಿ. ಈ ಪ್ರಕರಣದಲ್ಲಿ 3ನೇ ವ್ಯಕ್ತಿಯಾಗಿದ್ದು, ಮಧ್ಯಂತರ ಅರ್ಜಿ ಸಲ್ಲಿಸಲು ಅಧಿಕಾರವಿಲ್ಲ. ತನಿಖಾ ಅಧಿಕಾರಿಗಳು ಸಾಕ್ಷ್ಯಾಧಾರಗಳ ಪರಿಶೀಲನೆಯ ಬಳಿಕವೇ ಬಿ ವರದಿ ಸಲ್ಲಿಸಿದ್ದಾರೆ ಎಂದು ಪ್ರತಿವಾದಿಸಿದರು.
ಇದರಲ್ಲಿ ಇಂದು ತೀರ್ಪು ಪ್ರಕಟವಾಗಲಿದ್ದು, ಮುಂದಿನ ರಾಜಕೀಯ ಹಾಗೂ ಕಾನೂನು ಪ್ರಕ್ರಿಯೆಗೆ ದಿಕ್ಕು ನೀಡುವ ಸಾಧ್ಯತೆ ಇದೆ.