ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಬೆಂಗಳೂರು ಮಹಾನಗರ ಸಾರಿಗೆ ಬಸ್ ನಿರ್ವಾಹಕ ಮತ್ತು ಚಾಲಕನ ಮೇಲೆ ಕಿಡಿಗೇಡಿಗಳು ಹಲ್ಲೆ ಮಾಡಿರುವ ಘಟನೆ ನಗರದ ಟ್ಯಾನರಿ ರಸ್ತೆಯಲ್ಲಿ ಶನಿವಾರ ಸಂಜೆ ನಡೆದಿದೆ. ಕಿಡಿಗೇಡಿಗಳು ಕುಡಿದ ಮತ್ತಿನಲ್ಲಿ ನಿರ್ವಾಹಕ ಶಿವಕುಮಾರ್ ಮತ್ತು ಚಾಲಕ ಗಗನ್ ಮೇಲೆ ಹಲ್ಲೆ ಮಾಡಿದ್ದಾರೆ. ಘಟನೆ ಸಂಬಂಧ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಶನಿವಾರ (ಅ.26) ರಂದು ಸಂಜೆ 3:40ರ ಸುಮಾರಿಗೆ ಬಿಎಂಟಿಸಿ 290E ಎಲೆಕ್ಟ್ರಿಕ್ ಬಸ್ ಯಲಹಂಕದಿಂದ ಶಿವಾಜಿನಗರಕ್ಕೆ ಹೊರಟಿತ್ತು. ಸಂಜೆ 5.25ಕ್ಕೆ ಟ್ಯಾನರಿ ರಸ್ತೆಯಲ್ಲಿ ಕೆನರಾ ಬ್ಯಾಂಕ್ ಬಸ್ ನಿಲ್ದಾಣದಲ್ಲಿ ಬಸ್ ನಿಲುಗಡೆಯಾಗಿದೆ. ಈ ವೇಳೆ ಸ್ಕೂಟಿ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ವ್ಯಕ್ತಿಗಳು ವಾಹನದ ಮುಂಭಾಗಲಿನಿಂದ ಒಳ ಬಂದು ಕರ್ತವ್ಯದಲ್ಲಿದ್ದ ಚಾಲಕ ಗಗನ್ ಅವರಿಗೆ ಏಕಾಏಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈ ತಿರುವಿ, ಮುಖಕ್ಕೆ ಗುದ್ದಿದ್ದಾರೆ. ಈ ವೇಳೆ ನಿರ್ವಾಹಕ ಶಿವಕುಮಾರ ತಡೆಯಲು ಹೋದಾಗ, ಅವರನ್ನು ಹೊರಗಡೆ ಎಳೆದು ಬಸ್ಸಿನ ಮುಂಭಾಗದಲ್ಲಿ ನಿಲ್ಲಿಸಿ ಥಳಿಸಿ ಮುಖ, ಕತ್ತು ಮತ್ತು ಸೊಂಟದ ಭಾಗಕ್ಕೆ ಗುದ್ದಿ ಹಲ್ಲೆ ಮಾಡಿದ್ದಾರೆ.
ಕರ್ತವ್ಯ ನಿರ್ವಹಿಸುತ್ತಿರುವಾಗ ಬಂದು ಅಡ್ಡಿಪಡಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಹೊಡೆದು ಹತ್ಯೆ ಮಾಡಿರುವ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಚಾಲಕ ಗಗನ್ ದೂರು ದಾಖಲಿಸಿದ್ದಾರೆ.