ಬೆಂಗಳೂರು: ದೀಪಗಳ ಹಬ್ಬ ದೀಪಾವಳಿಗೆ ರಾಜಧಾನಿ ಬೆಂಗಳೂರು ಭರ್ಜರಿ ಸಿದ್ಧತೆ ಮಾಡಿದ್ದು, ನಗರದಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿದೆ. ಇತ್ತ ಪಟಾಕಿ ಮಾರಾಟ ಕೂಡ ಜೋರಾಗಿದೆ. ಬೆಂಗಳೂರಿನ ಚಾಮರಾಜಪೇಟೆ ಸೇರಿ ಹಲವೆಡೆ ಮೈದಾನಗಳಲ್ಲಿ ಪಟಾಕಿ ಸ್ಟಾಲ್ಗಳಲ್ಲಿ ಭರ್ಜರಿ ವ್ಯಾಪಾರವಾಗುತ್ತಿದೆ. ಮೊದಲ ದಿನವಾದ್ದರಿಂದ ಗ್ರಾಹಕರ ಸಂಖ್ಯೆ ಕಡಿಮೆ ಇದ್ದರೂ ಕೂಡ ಹಾಕಿರುವ ಬಂಡವಾಳಕ್ಕೆ ತಕ್ಕ ವ್ಯಾಪಾರ ಆಗುತ್ತಿರುವುದಕ್ಕೆ ವ್ಯಾಪಾರಿಗಳು ಖುಷಿಯಾಗಿದ್ದಾರೆ. ಇನ್ನು ಹಸಿರು ಪಟಾಕಿಗಳ ಮಾರಾಟ ಮಾಡಲು ಮಾತ್ರ ಅವಕಾಶ ಕೊಟ್ಟಿರುವುದರಿಂದ ಪೊಲೀಸರು ನೀಡಿರುವ ಮಾರ್ಗಸೂಚಿಯಂತೆಯೇ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಪಟಾಕಿ ವ್ಯಾಪಾರ ನಡೆಸಲಾಗುತ್ತಿದೆ.
ಇನ್ನು ಬಗೆ ಬಗೆಯ ಗ್ರೀನ್ ಪಟಾಕಿಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಹೊಸೂರಿನಿಂದ ಬಂದಿರುವ ಪಟಾಕಿಗಳು ಗ್ರಾಹಕರ ಗಮನಸೆಳೆಯುತ್ತಿವೆ. ಗ್ರೀನ್ ಪಟಾಕಿಗೆ ಮಾತ್ರ ಮಾರಾಟಕ್ಕೆ ಅವಕಾಶ ಇರುವುದರಿಂದ ಢಂ ಢಂ ಅಂತಾ ಸದ್ದುಮಾಡುವ ದೊಡ್ಡ ದೊಡ್ಡ ಪಟಾಕಿಗಳಿಗೆ ಹುಡುಕಾಡುವ ಜನರಿಗೆ ಸ್ವಲ್ಪ ಬೇಸರವಾಗಿದೆ. ಅತ್ತ ಪಟಾಕಿಗಳ ಬೆಲೆ ಏರಿಕೆಯಾಗಿರುವುದು ಕೂಡ ಗ್ರಾಹಕರನ್ನು ನಿರಾಸೆಗೊಳಿಸಿದೆ.
ಸದ್ಯ ಇಂದಿನಿಂದ ದೀಪಾವಳಿಯ ಆಚರಣೆ ಶುರುವಾಗಿದ್ದು, ಹಬ್ಬವನ್ನು ದೀಪಗಳ ಜೊತೆ ರಂಗೇರಿಸಲು ಪಟಾಕಿಗಳು ಕೂಡ ಸಜ್ಜಾಗಿವೆ. ಇತ್ತ ಪಟಾಕಿಯಿಂದ ಆಗಬಹುದಾದ ಅನಾಹುತಗಳನ್ನ ತಪ್ಪಿಸಲು ಪೊಲೀಸ್ ಇಲಾಖೆ ಕೆಲ ಸಲಹೆ ಸೂಚನೆಗಳನ್ನ ನೀಡಿದೆ.
ಪಟಾಕಿ ಸಿಡಿಸುವವರಿಗೆ ಪೊಲೀಸರ ಸಲಹೆಗಳೇನು?
- ಲೈಸೆನ್ಸ್ ಪಡೆದ ಅಂಗಡಿಯಿಂದ ಮಾತ್ರ ಪಟಾಕಿ ಖರೀದಿಸಿ.
- ಅತಿ ಹೆಚ್ಚು ಶಬ್ದ,ಮಾಲಿನ್ಯ ಉಂಟು ಮಾಡೋ ಪಟಾಕಿ ಬೇಡ.
- ಚಿಕ್ಕ ಮಕ್ಕಳು ಒಬ್ಬರೇ ಪಟಾಕಿ ಹಚ್ಚಲು ಬಿಡಬಾರದು.
- ತೆರೆದ ಮೈದಾನ, ಕಡಿಮೆ ಜನರಿರೋ ಪ್ರದೇಶದಲ್ಲಿ ಮಾತ್ರ ಪಟಾಕಿ ಸಿಡಿಸಿ.
- ಪಟಾಕಿ ಹಚ್ಚುವ ಕಡೆ ಬೆಂಕಿ ನಿರೋಧಕ, ನೀರು ಬಳಸಿ.
ಒಟ್ಟಿನಲ್ಲಿ ಬೆಳಕಿನ ಹಬ್ಬ ದೀಪಾವಳಿಗೆ ದೀಪಗಳ ಜೊತೆಗೆ ಪಟಾಕಿಗಳಿಗೂ ಬೇಡಿಕೆ ಹೆಚ್ಚಾಗಿದೆ. ಇತ್ತ ರಾತ್ರಿ 8 ಗಂಟೆಯಿಂದ ರಾತ್ರಿ 10 ಗಂಟೆ ತನಕ ಮಾತ್ರ ಪಟಾಕಿ ಸಿಡಿಸಲು ಅವಕಾಶ ಕೊಡಲಾಗಿದ್ದು, ಪರಿಸರಕ್ಕೆ ಹಾನಿಮಾಡದಂತೆ ಪರಿಸರಸ್ನೇಹಿ ದೀಪಾವಳಿ ಆಚರಿಸುವ ಮೂಲಕ ಜವಬ್ದಾರಿಯುತ ನಾಗರೀಕರಾಗಬೇಕಿದೆ.