Friday, April 4, 2025
Google search engine

Homeಅಪರಾಧಬೆಂಗಳೂರು: ಕಳ್ಳ ಮಗನ ಮೃತದೇಹ ಒಯ್ಯಲು ನಿರಾಕರಿಸಿದ ಕೇರಳದ ತಾಯಿ

ಬೆಂಗಳೂರು: ಕಳ್ಳ ಮಗನ ಮೃತದೇಹ ಒಯ್ಯಲು ನಿರಾಕರಿಸಿದ ಕೇರಳದ ತಾಯಿ

ಬೆಂಗಳೂರು: ಬೆಂಗಳೂರಿನಲ್ಲಿ ಕಳ್ಳ ಮಗನ ಮೃತದೇಹ ಸ್ವೀಕರಿಸಲು ಕೇರಳದ ತಾಯಿ ನಿರಾಕರಿಸಿ ವಾಪಸ್​ ಊರಿಗೆ ಹೋದ ಘಟನೆ ನಡೆದಿದೆ. ಕಳ್ಳ ವಿಷ್ಣು ಪ್ರಶಾಂತ್ ಮೃತ . 2024ರ ಡಿಸೆಂಬರ್ 24 ರಂದು ಕನಕಪುರ ರಸ್ತೆಯಲ್ಲಿರುವ ಫ್ಯಾಷನ್ ಫ್ಯಾಕ್ಟರಿ ಬೇಸ್ ಮೆಂಟ್​ನಲ್ಲಿ ಕೊಳೆತ ಸ್ಥಿತಿಯಲ್ಲಿ ವಿಷ್ಣು ಪ್ರಶಾಂತ್ ಶವ ಪತ್ತೆಯಾಗಿತ್ತು.

ವಿಷ್ಣು ಪ್ರಶಾಂತ್ ಶವದ ಬಳಿ ಮೊಬೈಲ್ ಪತ್ತೆಯಾಗಿತ್ತು. ಪೊಲೀಸರು ಪರಿಶೀಲಿಸಿದಾಗ ಕೇರಳದ ಓರ್ವ ವ್ಯಕ್ತಿಯದು ಎಂದು ತಿಳಿದು ಮೊಬೈಲ್‌ ಮಾಲೀಕನಿಗೆ ಕರೆ ಮಾಡಿ ವಿಚಾರಿಸಿದಾಗ “ನನ್ನ ಮೊಬೈಲ್ ಕಳ್ಳತನವಾಗಿದೆ” ಎಂದು ಹೇಳಿದ್ದಾರೆ. ನಂತರ ಕೋಣನಕುಂಟೆ ಪೊಲೀಸರು ಮೃತ ವಿಷ್ಣು ಪ್ರಶಾಂತ್​ ಫೋಟೋವನ್ನು ಕೇರಳ ಪೊಲೀಸರಿಗೆ ಕಳುಹಿಸಿದ್ದಾರೆ. ಕೈಮೇಲೆ ಇದ್ದ ಟ್ಯಾಟೂ ಆಧಾರದ ಮೇಲೆ ಸತ್ತವನು ವಿಷ್ಣು ಪ್ರಶಾಂತ್ ಎಂದು ದೃಢಪಟ್ಟಿದೆ.

ಕೇರಳ ಪೊಲೀಸರು ವಿಷ್ಣು ಪ್ರಶಾಂತ್ ತಾಯಿಗೆ ವಿಚಾರ ತಿಳಿಸಿದ್ದಾರೆ. ತಾಯಿ ಮಗನನ್ನು ನೋಡಲು ಬೆಂಗಳೂರಿಗೆ ಬರಲು ನಿರಾಕರಿಸಿದ್ದಾರೆ. ಪೊಲೀಸರು ಖಾತರಿಗಾಗಿ ವಿಷ್ಣು ಪ್ರಶಾಂತ್ ತಾಯಿಯನ್ನು ಬಲವಂತವಾಗಿ ಕರೆಸಿಕೊಂಡಿದ್ದಾರೆ. ಬೆಂಗಳೂರಿಗೆ ಬಂದ ವಿಷ್ಣು ಪ್ರಶಾಂತ್​ ತಾಯಿ ಮೃತಪಟ್ಟವನು ಮಗ ವಿಷ್ಣು ಪ್ರಶಾಂತ್ ಎಂದು ಗುರುತಿಸಿದ್ದರು. ಮೃತದೇಹ ಬೇಡವೆಂದು ಕೇರಳಕ್ಕೆ ವಾಪಸ್​ ಹೋಗಿದ್ದಾರೆ.

ಬಳಿಕ‌ ಪೊಲೀಸರೇ ಅಂತ್ಯಕ್ರಿಯೆ ನೆರವೇರಿಸಿ, ತನಿಖೆ ಮುಂದುವರಿಸಿದ್ದಾರೆ. ವಿಷ್ಣು ಪ್ರಶಾಂತ್ ಹಿನ್ನೆಲೆಯನ್ನು ಪರಿಶೀಲಿಸಿದಾಗ ಆತನ‌ ಮೇಲೆ‌ ಕೇರಳ, ತಮಿಳುನಾಡು, ಕರ್ನಾಟಕ‌ ಸೇರಿದಂತೆ ಹಲವೆಡೆ 30ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ಇರುವುದು ತಿಳಿದಿದೆ.

ವಿಷ್ಣು ಪ್ರಶಾಂತ್ ಕೇರಳದಲ್ಲಿ ಕಳ್ಳತನ‌ ಮಾಡಿ ಬೆಂಗಳೂರಿಗೆ ಬಂದು ತಲೆಮರೆಸಿಕೊಳ್ಳುತ್ತಿದ್ದನು. ಕಂಠಪೂರ್ತಿ ಕುಡಿದು ಮತ್ತಲ್ಲಿ ಪೊಲೀಸರು ಬರುತ್ತಿದ್ದಾರೆ ನನ್ನ ಹಿಡಿಯತ್ತಾರೆ ಎಂದು ಸ್ನೇಹಿತರಿಗೆ ಕರೆ ಮಾಡಿ ಹೇಳುತ್ತಿದ್ದನು. ವಿಷ್ಣು ಪ್ರಶಾಂತ್ ಮಾನಸಿಕ ಅಸ್ವಸ್ಥನಾಗಿದ್ದನು. ಈ ಹಿನ್ನೆಲೆಯಲ್ಲಿ ಸ್ನೇಹಿತರು ವಿಷ್ಣು ಪ್ರಶಾಂತ್​ನನ್ನು ಮರಳಿ ಕೇರಳಕ್ಕೆ ಕರೆದುಕೊಂಡು ಹೋಗಬೇಕೆಂದುಕೊಂಡಿದ್ದರು. ಆದರೆ ಅವರಿಗೆ ವಿಷ್ಣು ಪ್ರಶಾಂತ್​​ ಸಿಗದೆ ತಮಿಳುನಾಡಿಗೆ ಹೊರಟಿದ್ದರು. ನಂತರ ವಿಷ್ಣು ಪ್ರಶಾಂತ್ ಪತ್ತೆಯಾಗಿದ್ದು ಶವವಾಗಿ. ಇದು ಕೊಲೆಯೋ ಅಥವಾ ಆಕಸ್ಮಿಕ ಸಾವೋ ಇನ್ನೂ ನಿಗೂಢವಾಗಿದ್ದು ಕೋಣನಕುಂಟೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

RELATED ARTICLES
- Advertisment -
Google search engine

Most Popular