ಬೆಂಗಳೂರು: ಕಳೆದ 1 ತಿಂಗಳಲ್ಲಿ 42 ಗಾಂಜಾ, ಡ್ರಗ್ಸ್ ಪ್ರಕರಣಗಳು ದಾಖಲಾಗಿವೆ. ಪ್ರಕರಣ ಸಂಬಂಧ 10 ವಿದೇಶಿ ಪ್ರಜೆಗಳು ಸೇರಿ 64 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ ಮಾಹಿತಿ ನೀಡಿದರು.
ಬೆಂಗಳೂರು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಂಧಿತ ಆರೋಪಿಗಳಿಂದ 140 ಕೆಜಿ ಗಾಂಜಾ, 1 ಕೆಜಿ ಗಾಂಜಾ ಆಯಿಲ್, 609 ಗ್ರಾಂ ಆಫೀಮು, 770 ಗ್ರಾಂ ಹೆರಾಯಿನ್, 2ಕೆಜಿ 436 ಗ್ರಾಂ ಚರಸ್, 509 ಗ್ರಾಂ ಕೊಕೇನ್, 5 ಕೆಜಿ 397 ಗ್ರಾಂ ಎಂಡಿಎಂಎ, 2569 LSD ಸ್ಟ್ರಿಪ್, 6 ಕೆಜಿ 725 ಗ್ರಾಂ ಅಂಫಟಮೈನ್, 11,908 ಎಕ್ಸ್ ಟೆಸಿ ಮಾತ್ರೆ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.
ಸಿಸಿಬಿ ಅಧಿಕಾರಿಗಳ ವಿರುದ್ಧ ಕೇಳಿ ಬಂದಿರುವ ಆರೋಪ ವಿಚಾರವಾಗಿ ಮಾತನಾಡಿದ ಅವರು, ರೇವ್ ಪಾರ್ಟಿ ಕೇಸ್ ನಲ್ಲಿ ತನಿಖೆ ನಡೆಸಿರುವ ಸಿಸಿಬಿ, ನ್ಯಾಯಾಲಯಕ್ಕೆ ಚಾರ್ಶಿಟ್ ಸಲ್ಲಿಕೆ ಮಾಡಿದೆ. ಸಿಸಿಬಿ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ತನಿಖೆ ನಡೆಸಿದ ಅಧಿಕಾರಿಗಳ ವಿರುದ್ಧ ಆರೋಪಿಸಿ ದೂರುಗಳನ್ನು ನೀಡಿದ್ದಾರೆ. ಬಂದ ದೂರುಗಳ ತನಿಖೆಯನ್ನು ಬೇರೆ ಬೇರೆ ಸಂಸ್ಥೆಗಳು ನಡೆಸುತ್ತಿವೆ. ಆರೋಪಿಗಳು ತನಿಖೆಯ ದಿಕ್ಕು ತಪ್ಪಿಸಲು ಈ ರೀತಿ ಮಾಡಿದ್ದಾರೆ ಎಂದರು.