ಬೆಂಗಳೂರು : ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನ ಪ್ರಾಣಬಿಟ್ಟಿದ್ದಾರೆ. ಈ ಶೋಕದಿಂದ ನೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡಳಿತ ಮಂಡಳಿ ಆರ್ಸಿಬಿ ಕೇರ್ಸ್ ಶುರುಮಾಡಿದ್ದು ಇದೀಗ ಆ ಬಗ್ಗೆ ಮತ್ತೊಂದು ಟ್ವಿಟ್ ಮಾಡಿದೆ.
ಮೃತ ಕುಟುಂಬಗಳಿಗೆ ತಲಾ 25 ಲಕ್ಷ ಘೋಷಣೆ ಮಾಡಲಾಗಿದ್ದು, ಲಾಯಲ್ ಫ್ಯಾನ್ಸ್ ಜತೆ ಸದಾ RCB ನಿಲ್ಲಲಿದೆ ಎಂಬ ಸ್ಪಷ್ಟ ಸಂದೇಶವನ್ನು RCB ಟ್ವಿಟ್ ಮೂಲಕ ಹೇಳಿದೆ. ಕಾಲ್ತುಳಿತ ಘಟನೆ ಬಳಿಕ ಮೌನಕ್ಕೆ ಶರಣಾಗಿದ್ದ ಆರ್ಸಿಬಿ, ಲಾಯಲ್ ಫ್ಯಾನ್ಸ್ಗೆ ಭಾವುಕ ಪತ್ರ ಬರೆದಿತ್ತು. Rcb cares ಬಗ್ಗೆ ಹೊಸ ಪ್ರತಿಜ್ಞೆ ಮಾಡಿದ್ದ ಮ್ಯಾನೇಜ್ಮೆಂಟ್, ಫ್ಯಾನ್ಸ್ಗಾಗಿ ಹೊಸ ಯೋಜನೆ ರೂಪಿಸುವ ಮುನ್ಸೂಚನೆ ನೀಡಿತ್ತು. ಇದೀಗ ಮತ್ತೆ ಟ್ವಿಟ್ ಮಾಡಿ ಅಭಿಮಾನಿಗಳ ಹೃದಯ ಗೆದ್ದಿದೆ.
ಜೂನ್ 4, 2025 – ಈ ದಿನ ನಮ್ಮ ಹೃದಯದಲ್ಲಿ ಶಾಶ್ವತವಾಗಿ ಉಳಿಯಲಿದೆ. ನಾವು ಕಳೆದುಕೊಂಡಿದ್ದು 11 ಅಭಿಮಾನಿಗಳನ್ನಷ್ಟೇ ಅಲ್ಲ… ಅವರು ನಮ್ಮ ಕುಟು೦ಬದ ಸದಸ್ಯರಾಗಿದ್ದರು. ನಮ್ಮ ಹೃದಯದ ಭಾಗವಾಗಿದ್ದರು. ಅವರ ಉತ್ಸಾಹವೇ ನಮ್ಮ ಊರು, ಸಮುದಾಯ ಮತ್ತು ತ೦ಡಕ್ಕೆ ಜೀವ ತುಂಬುವ ಬೆಳಕಾಗಿತ್ತು. ನಮ್ಮ ನೆನಪುಗಳಲ್ಲಿ ಅವರು ಸದಾ ಜೀವಂತವಾಗಿರುತ್ತಾರೆ.
ಅವರ ಜಾಗವನ್ನು ಯಾವ ಸಹಾಯವೂ ತುಂಬಲಾರದು. ಆದರೆ ಮೊದಲನೇ ಮತ್ತು ಗೌರವದ ಸಂಕೇತವಾಗಿ, ಆರ್‌ಸಿಬಿ ಪ್ರತಿ ಕುಟುಂಬಕ್ಕೆ ತಲಾ ₹25 ಲಕ್ಷ ನೆರವನ್ನು ನೀಡಿದೆ. ಇದು ಕೇವಲ ಆರ್ಥಿಕ ಸಹಾಯವಲ್ಲ; ಕರುಣೆ, ಒಗ್ಗಟ್ಟು ಮತ್ತು ನಿರಂತರ ಕಾಳಜಿಯ ಭರವಸೆ.ಇದು ಆರ್‌ಸಿಬಿ ಕೇರ್ಸ್‌ನ ಆರಂಭವೂ ಹೌದು. ಅವರ ನೆನಪನ್ನು ಗೌರವಿಸುವ ಮೂಲಕ ಶುರುವಾದ ಈ ಪ್ರಯತ್ನ, ಅಭಿಮಾನಿಗಳ ಭಾವನೆ, ನಂಬಿಕೆ ಮತ್ತು ಸುರಕ್ಷತೆ ಪ್ರತಿಬಿಂಬಿಸುವ ದೀರ್ಘಕಾಲದ ಬದ್ಧತೆ. ಎಂದು RCB ಬರೆದುಕೊಂಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ( ದುರಂತದ ಕಹಿ ನೆನಪು ಇನ್ನು ಕೂಡಾ ಕಾಡುತ್ತಿದೆ. ಜೂನ್ 4ರಂದು ಕಾಲ್ತುಳಿತ ಘಟನೆ ನಡೆದಿತ್ತು. ಈ ಘಟನೆ ನಡೆದ ಬಳಿಕ ಆರ್‌ಸಿಬಿ ಅಷ್ಟಾಗಿ ಯಾವುದೇ ಪೋಸ್ಟ್‌ಗಳನ್ನು ಹಂಚಿಕೊಂಡಿರಲಿಲ್ಲ. ಇದೀಗ ಮೂರು ತಿಂಗಳ ಬಳಿಕ ಆರ್‌ಸಿಬಿ ಪೋಸ್ಟ್ ಮಾಡಿದ್ದು ಎರಡು ದಿನಗಳ ಹಿಂದಷ್ಟೇ ಮೌನ ಮುರಿದು, ಅಭಿಮಾನಿಗಳೊಂದಿಗೆ ಸದಾ ಇರುವುದಾಗಿ ತಿಳಿಸಿತ್ತು.
ಆರ್‌ಸಿಬಿ ಟ್ವೀಟ್ ಮಾಡಿ ತನ್ನ ಮೂರು ತಿಂಗಳ ಮೌನಕ್ಕೆ ಅಂತ್ಯ ಹಾಡಿದೆ. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಆರ್‌ಸಿಬಿಯು ಪೋಸ್ಟ್ ಮಾಡಿದೆ. ಇದರೊಂದಿಗೆ ಫ್ರಾಂಚೈಸಿಯು ತಮ್ಮ ತಂಡದ ಅಭಿಮಾನಿಗಳಿಗಾಗಿ ಆರ್‌ಸಿಬಿ ಕೇರ್ಸ್ ಅನ್ನು ಘೋಷಿಸಿತ್ತು.
ಪೋಸ್ಟ್‌ನಲ್ಲಿ ಬರೆದುಕೊಂಡಿದ್ದ ಆರ್‌ಸಿಬಿ, ನಾವು ಪೋಸ್ಟ್ ಮಾಡಿ ಸುಮಾರು ಮೂರು ತಿಂಗಳ ಕಾಲ ಕಳೆದಿದೆ. ನಮ್ಮ ಮೌನ, ಖಾಲಿತನದಿಂದಷ್ಟೇ ಅಲ್ಲ, ದುಃಖದಿಂದ ತುಂಬಿದ ತೀವ್ರವಾದ ಮೌನ. ಈ ಮಾಧ್ಯಮದ ಮುಖಾಂತರ ನೀವೆಲ್ಲಾ ಸಂತೋಷದಿಂದ ಸಂಭ್ರಮಿಸುವ ವಿಷಯಗಳನ್ನು ಮತ್ತು ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದೆವು. ಆದರೆ ಜೂನ್ 4ರ ಘಟನೆ ಎಲ್ಲವನ್ನೂ ಬದಲಾಯಿಸಿತು. ಆ ದಿನ ನಮ್ಮ ಹೃದಯವನ್ನು ಮುರಿಯಿತು. ನಂತರದ ಮೌನವು ಕೇವಲ ನಿಶ್ಯಬ್ಧವಲ್ಲ, ಅದು ಶ್ರದ್ಧೆಯಿ೦ದ ತು೦ಬಿದ ಶಾಂತ ಶ್ರದ್ಧಾಂಜಲಿ.
ಈ ಮೌನದೊಳಗೆ ನೋವನ್ನು ಅನುಭವಿಸುತ್ತಾ ನಾವು ಆಳವಾಗಿ ಯೋಚಿಸಿದ್ದೆವು ಮತ್ತು ಅನೇಕ ವಿಷಯಗಳನ್ನು ಕಲಿತೆವು. ನೋವನ್ನೇ ಶ್ರದ್ಧೆಯಾಗಿ, ನಂಬಿಕೆಯಾಗಿ ರೂಪಿಸಬೇಕೆಂದು ತೀರ್ಮಾನಿಸಿದ್ದೆವು. ಅದರ ಫಲವೇ ಆರ್‌ಸಿಬಿ ಕೇರ್ಸ್. ನಮ್ಮ ಅಭಿಮಾನಿಗಳು ಮತ್ತು ಸಮುದಾಯಕ್ಕಾಗಿ ನಿಷ್ಠೆಯಿಂದ ರೂಪಿಸಿದ ಒಂದು ಯೋಜನೆ. ಇಂದು ನಾವು ಮರಳಿದ್ದೇವೆ. ನಿಮ್ಮೊಂದಿಗೆ ನಿಲ್ಲುವ ಭರವಸೆಯನ್ನು ನೀಡುತ್ತ, ಕರ್ನಾಟಕದ ಹೆಮ್ಮೆಯಾಗಿ ಮುಂದೆ ಸಾಗುತ್ತೇವೆ. ಇದು ನಮ್ಮ ಕಾಳಜಿ, ನಮ್ಮ ಪ್ರತಿಜ್ಞೆ. ಆರ್‌ಸಿಬಿ ಕೇರ್ಸ್: ನಾವು ಸದಾ ನಿಮ್ಮೊಂದಿಗಿದ್ದೇವೆ. ಹೆಚ್ಚಿನ ಮಾಹಿತಿ… ಶೀಘ್ರದಲ್ಲೇ ಎಂದು ಆರ್‌ಸಿಬಿ ಬರೆದುಕೊಂಡಿತ್ತು.