ಬೆಂಗಳೂರು: ವಿಧಾನ ಪರಿಷತ್‌ನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಪುಟ್ಟಣ್ಣ ಬಿಜೆಪಿ, ಜೆಡಿಎಸ್ ಮೈತ್ರಿಯ ಅಭ್ಯರ್ಥಿಯಾಗಿದ್ದ ಎ.ಪಿ. ರಂಗನಾಥ್ ಅವರನ್ನು ೧,೫೦೭ ಮತಗಳ ಅಂತರದಿಂದ ಸೋಲಿಸಿ ಗೆಲುವು ಸಾಧಿಸಿದ್ದಾರೆ.
ಪುಟ್ಟಣ್ಣ ೮,೨೬೦ ಮತಗಳನ್ನು ಪಡೆದರೆ, ರಂಗನಾಥ್ ೬,೭೫೩ ಮತಗಳನ್ನು ಗಳಿಸಿದ್ದಾರೆ. ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪ ಚುನಾವಣೆಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆ ವ್ಯಾಪ್ತಿಯ ಮತದಾರರು ಫೆ.೧೬ರಂದು ಮತದಾನ ಮಾಡಿದ್ದರು. ಒಟ್ಟು ೧೯,೧೫೨ ಮತಗಳ ಪೈಕಿ ೧೬,೫೪೪ ಮಂದಿ (ಪುರುಷರು ೬,೫೦೪, ಮಹಿಳೆಯರು ೧೦,೦೪೦) ಮತ ಚಲಾಯಿಸಿದರು.
ಈ ಹಿಂದೆ ಇದೇ ಕ್ಷೇತ್ರದಿಂದ ಆಯ್ಕೆಯಾಗಿದ್ದ ಪುಟ್ಟಣ್ಣ ಅವರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಮಾರ್ಚ್‌ನಲ್ಲಿ ರಾಜೀನಾಮೆ ನೀಡಿದ್ದರು. ಅಂದಿನಿಂದ ಖಾಲಿ ಉಳಿದಿದ್ದ ಈ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿತ್ತು. ಇದೀಗ ಮತ್ತೆ ಪುಟ್ಟಣ್ಣ ಗೆಲುವು ಸಾಧಿಸಿದ್ದು, ಈ ಸ್ಥಾನದ ಅವಧಿ ೨೦೨೬ ನವೆಂಬರ್ ೧೧ರವರೆಗಿದೆ.