ಬೆಂಗಳೂರಿನಲ್ಲಿ ಬಿಸಿಲು ಹೆಚ್ಚುತ್ತಿದ್ದು, ಏಕಾಏಕಿ ಅಂತರ್ಜಲ ಕುಸಿತವಾಗುತ್ತಿದೆ. ಕಳೆದ ವರ್ಷದಂತೆ ಈ ವರ್ಷವೂ ನೀರಿನ ಅಭಾವ ಸೃಷ್ಟಿಯಾಗುವ ಸಾಧ್ಯತೆಗಳಿವೆ. ಖಾಸಗಿ ಟ್ಯಾಂಕರ್ ಗಳ ಮಾಫಿಯಾ ಈ ಅವಕಾಶವನ್ನು ದುರುಪಯೋಗಪಡಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ. ಭಾರತೀಯ ವಿಜ್ಞಾನ ಸಂಸ್ಥೆ ನಗರದ 200 ವಾರ್ಡ್ ಗಳಲ್ಲಿ 80ರಲ್ಲಿ ಅಂತರ್ಜಲ ಕುಸಿತವಾಗಿರುವುದನ್ನು ಗುರುತಿಸಿದೆ.
ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಯಾಗಿರುವ ಅನೇಕ ಭಾಗಗಳಲ್ಲಿ ಕಾವೇರಿ ನೀರಿನ ಸಂಪರ್ಕ ಇಲ್ಲದ ಕಾರಣ ಅಂತರ್ಜಲವೇ ಆಧಾರವಾಗಿದೆ. ಆದರೆ ಇದೀಗ ಅಂತರ್ಜಲ ಬರಿದಾಗುತ್ತಿದ್ದು, ಬೋರ್ ವೆಲ್ ಮತ್ತು ಟ್ಯಾಂಕರ್ ಗಳನ್ನೇ ಅವಲಂಬಿಸಬೇಕಾಗಿದೆ. ಭಾರತೀಯ ವಿಜ್ಞಾನ ಸಂಸ್ಥೆಯ ಅಧ್ಯಯನದ ಪ್ರಕಾರ ಪ್ರತಿದಿನ 800 ಎಂ ಎಲ್ ಡಿ ನೀರನ್ನು ಹೊರತೆಗೆಯಲಾಗುತ್ತಿದೆ. ನಗರದಲ್ಲಿ ಶೇ.20 ರಷ್ಟು ನಾಗರೀಕರು ಟ್ಯಾಂಕರ್ ನೀರನ್ನು ಅವಲಂಬಿಸಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಹೇಳಿದ್ದಾರೆ.
ಆನ್‌ಲೈನ್ ಮೂಲಕ ಬುಕ್ಕಿಂಗ್ ಮೂಲಕ ಶುದ್ಧ ನೀರು ಸರಬರಾಜು:
ಆನ್‌ಲೈನ್ ಮೂಲಕ ಬುಕ್ಕಿಂಗ್ ಮಾಡಿದ ಜನರ ಮನೆಬಾಗಿಲಿಗೆ ಬಿಐಎಸ್ ಪ್ರಾಮಾಣೀಕೃತ ಶುದ್ದ ಕುಡಿಯುವ ನೀರನ್ನು ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು ಮಾಡುವ ವಿನೂತನ ಯೋಜನೆ ಸಂಚಾರಿ ಕಾವೇರಿ – ಕಾವೇರಿ ಆನ್ ವ್ಹೀಲ್ಸ್ ಯೋಜನೆ ಅನುಷ್ಠಾನಕ್ಕೆ ಬೆಂಗಳೂರು
ಜಲಮಂಡಳಿ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ಬೆಂಗಳೂರು ಜಲಮಂಡಳಿ ತಿಳಿಸಿದೆ. ಬೇಸಿಗೆಯಲ್ಲಿ ಅಂತರ್ಜಲಮಟ್ಟ ಕಡಿಮೆಯಾದಾಗ ನೀರಿನ ಕೊರತೆ ಹೆಚ್ಚಾಗುತ್ತದೆ. ಈ ಸಂಧರ್ಭದಲ್ಲಿ ಖಾಸಗಿ ಟ್ಯಾಂಕರ್‌ಗಳು ತಮ್ಮ ದರವನ್ನು ಹೆಚ್ಚಿಸುವುದರಿಂದ ಜನಸಾಮಾನ್ಯರಿಗೆ ಇನ್ನಷ್ಟು ತೊಂದರೆಯಾಗುತ್ತದೆ. ಈ ಹಿನ್ನಲೆಯಲ್ಲಿ ಬಿಐಎಸ್ ಪ್ರಾಮಾಣೀಕೃತ ಶುದ್ದ ಕುಡಿಯುವ ನೀರನ್ನು ಜನರ ಮನೆಬಾಗಿಲಿಗೆ ತಲುಪಿಸಲು “ಸಂಚಾರಿ ಕಾವೇರಿ – ಕಾವೇರಿ ಆನ್ ವ್ಹೀಲ್ಸ್” ಅನ್ನು ಜಾರಿಗೊಳಿಸಲು ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಆಪ್ ಹಾಗೂ ವೆಬ್‌ಸೈಟ್ ರೂಪಿಸಲಾಗಿದೆ ಎಂದು ಜಲ ಮಂಡಳಿ ಅಧ್ಯಕ್ಷ ಡಾ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
.
ಸಂಚಾರಿ ಕಾವೇರಿ – ಕಾವೇರಿ ಆನ್ ವ್ಹೀಲ್ಸ್ ಯೋಜನೆಯ ಪ್ರಮುಖ ಅಂಶಗಳು:
⦁ಟ್ಯಾಂಕರ್ ಟ್ರಾಕಿಂಗ್, ಓಟಿಪಿ ಪ್ರೊಟೆಕ್ಟೆಡ್ ಸೇವೆ
⦁ಬೆಂಗಳೂರು ನಾಗರೀಕರು ಆನ್ ಡಿಮ್ಯಾಂಡ್ ಟ್ಯಾಂಕರ್ ನೀರು ಬುಕ್ಕಿಂಗ್ ಮಾಡಲು ಅವಕಾಶ
⦁ಬಿಐಎಸ್ ಪ್ರಮಾಣಿತ ಶುದ್ದ ಹಾಗೂ ಸ್ವಚ್ಚ ಕುಡಿಯುವ ನೀರು ಲಭ್ಯ
⦁ಸಕಾಲದಲ್ಲಿ ಸರಿಯಾದ ಪ್ರಮಾಣದಲ್ಲಿ ನೀರು ನೀಡುವ ವ್ಯವಸ್ಥೆ
⦁ದರ ಏರಿಕೆಯ ಭಯವಿಲ್ಲದೇ ಜನರು ನಿಗದಿತ ರಿಯಾಯತಿ ದರದಲ್ಲಿ ಟ್ಯಾಂಕರ್ ನೀರು
ಬುಕ್ಕಿಂಗ್ ಗೆ ಅವಕಾಶ
⦁ಯಾವುದೇ ಸರ್ ಚಾರ್ಜ್, ಬೇಡಿಕೆ ಹೆಚ್ಚಾಗುವ ಛಾರ್ಜ್ ಗಳ ಭಯವಿಲ್ಲ