Tuesday, April 8, 2025
Google search engine

Homeರಾಜ್ಯಅಡಿಕೆಹಾಳೆ ಉತ್ಪನ್ನಗಳಿಗೆ ಬಿಐಎಸ್ ಪ್ರಮಾಣೀಕರಣ ದೊರತರೆ ಮೌಲ್ಯ ಹೆಚ್ಚುತ್ತದೆ

ಅಡಿಕೆಹಾಳೆ ಉತ್ಪನ್ನಗಳಿಗೆ ಬಿಐಎಸ್ ಪ್ರಮಾಣೀಕರಣ ದೊರತರೆ ಮೌಲ್ಯ ಹೆಚ್ಚುತ್ತದೆ


ಶಿವಮೊಗ್ಗ: ಅಡಿಕೆ ಹಾಳೆಯ ಉತ್ಪನ್ನಗಳಿಗೆ ಭಾರತೀಯ ಮಾನಕ ಬ್ಯೂರೋ(ಬಿಐಎಸ್) ಪ್ರಮಾಣೀಕರಣ ದೊರೆತರೆ ಈ ಉತ್ಪನ್ನಕ್ಕೆ ಉತ್ತಮ ಮಾರುಕಟ್ಟೆ, ಆದಾಯ ದೊರಕುವುದರೊಂದಿಗೆ ಮೌಲ್ಯ ಹೆಚ್ಚುತ್ತದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಗೋಪಿನಾಥ್ ತಿಳಿಸಿದರು.

ಭಾರತೀಯ ಮಾನಕ ಬ್ಯುರೋ(ಬಿಐಎಸ್)ಧಾರವಾಡ, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಶಿವಮೊಗ್ಗ ಜಿಲ್ಲಾ ಅಡಿಕೆ ಹಾಳೆ ಉತ್ಪನ್ನಗಳ ತಯಾರಕರು ಮತ್ತು ಮಾರಾಟಗಾರರ ಸಂಘದ ಸಹಭಾಗಿತ್ವದಲ್ಲಿ ಇಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ ಆಯೋಜಿಸಲಾಗಿದ್ದ ‘ಅಡಿಕೆ ಹಾಳೆ ಉತ್ಪನ್ನಗಳ ಪ್ರಮಾಣಿಕರಣದ ಮಹತ್ವ’ ಕುರಿತಾದ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಭಾರತ ಈಗ ಅಭಿವೃದ್ದಿ ಹೊಂದುತ್ತಿರುವ ದೇಶದಿಂದ ಅಭಿವೃದ್ದಿ ಹೊಂದಿದ ದೇಶ ಎಂದು ಮಾರ್ಪಾಡಾಗುತ್ತಿದೆ. 1995 ರ ನಂತರ ಜಾರಿಯಾದ ಜಾಗತೀಕರಣ ನೀತಿಯಿಂದ ದೇಶದಲ್ಲಿ ಚಿತ್ರಣ ಬದಲಾಗುತ್ತಾ ಬಂದಿದೆ. ಹೊಸ ಸ್ಟಾರ್ಟ್‍ಅಪ್‍ಗಳು ನವೀನವಾಗಿ ಉತ್ಪನ್ನಗಳನ್ನು ಶುರು ಮಾಡುತ್ತಿದ್ದು, ಅಂತಹ ಉತ್ಪನ್ನಗಳಿಗೆ ಬಿಐಎಸ್ ಪ್ರಮಾಣೀಕರಣ ನೀಡುವ ಕೆಲಸ ಮಾಡುತ್ತಿದೆ. ಸುಮಾರು 45 ಸಾವಿರ ಉತ್ಪನ್ನಗಳಿಗೆ ಬಿಐಎಸ್ ಅಧಿಕೃತ ಪರಿವಾನಗಿ ನೀಡಿದೆ.

ಅಡಿಕೆ ಹಾಳೆಯಿಂದ ತಯಾರಾಗುವ ಪ್ಲೇಟ್ ಇತರೆ ಉತ್ಪನ್ನಗಳನ್ನು ನಾವು ಯಾವುದೇ ಮಾನದಂಡ, ಪ್ರಮಾಣೀಕರಣ ಇಲ್ಲದೆ ಮಾಡುತ್ತಿದ್ದೇವೆ. ಇಂತಹ ಬೇಡಿಕೆಯ ಉತ್ಪನ್ನಕ್ಕೆ ಬಿಐಎಸ್ ಪ್ರಮಾಣೀಕರಣ ದೊರೆತರೆ ಉತ್ಪನ್ನದ ಮೌಲ್ಯವರ್ಧನೆಯಾಗಿ ಆದಾಯವೂ ಹೆಚ್ಚುತ್ತದೆ ಎಂದ ಅವರು ಮುಂದಿನ ದಿನಗಳಲ್ಲಿ ಬಿಐಎಸ್ ಮಾನದಂಡ ಅಳವಡಿಸಿಕೊಂಡು ವಿಶ್ವದರ್ಜೆಯ ಅಡಿಕೆ ಹಾಳೆ ಉತ್ಪನ್ನಗಳನ್ನು ತಯಾರಿಸೋಣ ಎಂದು ಹೇಳಿದರು.

ರಫ್ತು ಮಾಡುವ ಉತ್ಪನ್ನಗಳ ಗುಣಮಟ್ಟದ ಬಗ್ಗೆ ತೋರುವ ಕಾಳಜಿಯಂತೆ ಸ್ಥಳೀಯವಾಗಿ ಮಾರಾಟವಾಗುವ ಉತ್ಪನ್ನದ ಬಗ್ಗೆಯೂ ಆಸಕ್ತಿ ವಹಿಸಬೇಕು. ಹಾಳೆಯಲ್ಲಿನ ಫಂಗಸ್‍ನ್ನು ತೆಗೆದು ಹಾಕಲು ಕ್ರಮ ವಹಿಸಿ ಗುಣಮಟ್ಟದ ಉತ್ಪನ್ನಗಳನ್ನು ನೀಡಲು ಪ್ರಯತ್ನಿಸಬೇಕು. ಗುಣಮಟ್ಟವನ್ನು ವರ್ಗೀಕರಿಸಿ ಮಾರಾಟ ಮಾಡಬೇಕು ಎಂದ ಅವರು ಪ್ರಮಾಣೀಕರಣದ ಕುರಿತು ಮಾಹಿತಿ ನೀಡಲು ಬಂದಿರುವ ಬಿಐಎಸ್ ತಂಡಕ್ಕೆ ಧನ್ಯವಾದ ತಿಳಿಸಿದರು.

ಬಿಐಎಸ್ ಹುಬ್ಬಳ್ಳಿ ವಿಜ್ಞಾನಿ ಮರ್ಸಿರಾಣಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಗುಣಮಟ್ಟದ ಮಾನದಂಡಗಳ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಸಂಚಾಲಕ ಹಾಗೂ ಬಿಐಎಸ್ ಹುಬ್ಬಳ್ಳಿಯ ಸಂಪನ್ಮೂಲ ವ್ಯಕ್ತಿ ಎಂ.ಎಂ ಜಯಸ್ವಾಮಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವಿಜಯ್ ಕುಮಾರ್, ಇತರೆ ಪದಾಧಿಕಾರಿಗಳು, ಅಡಿಕೆ ಹಾಳೆ ಉತ್ಪನ್ನ ತಯಾರಕರು, ರಫ್ತುದಾರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular