ವರದಿ : ಚಪ್ಪರದಹಳ್ಳಿ ವಿನಯ್ ಕುಮಾರ್
ಬೆಟ್ಟದಪುರ: ಸಮೀಪದ ಚನ್ನಕಲ್ಲು ಕಾವಲು ಗ್ರಾಮದಲ್ಲಿ ನ್ಯಾಯಾಲಯದಲ್ಲಿರುವ ಜಮೀನಿನ ಅಳತೆಯ ವಿಚಾರವನ್ನು ಲೆಕ್ಕಿಸದೆ ಅಧಿಕಾರಿಗಳು ಸರ್ವೆ ಮಾಡಲು ಆಗಮಿಸಿದ ಸಂದರ್ಭದಲ್ಲಿ ರೈತ ಸಂಘದ ಮುಖಂಡರು ತಡೆದು ಅಧಿಕಾರಿಗಳನ್ನು ಹಿಂದಿರುಗಿಸಿದ ಪ್ರಸಂಗ ಶನಿವಾರ ನಡೆದಿದೆ.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಸುಂದರ್ ಗೌಡ ಮಾತನಾಡಿ ಚನ್ನಕಲ್ಲು ಕಾವಲು ಗ್ರಾಮದ ಸರ್ವೆ ನಂಬರ್ 30/114 ರಲ್ಲಿ ವೆಂಕಟೇಶ್ ರವರಿಗೆ 2.35 ಎಕರೆ ಗುಂಟೆ ಜಮೀನಿದ್ದು ಆ ಜಮೀನನ್ನು ಪ್ರಬಲರು ಅತಿಕ್ರಮವಾಗಿ ಜಮೀನನ್ನು ಪಡೆದುಕೊಳ್ಳುವುದಕ್ಕೆ ಜನಪ್ರತಿನಿಧಿಗೆ ಹಾಗೂ ತಾಲ್ಲೂಕು ಅಧಿಕಾರಿಗಳಿಗೆ ಒತ್ತಡ ನೀಡಿ ಜಮೀನನ್ನು ಕಬಳಿಸಲು ಮುಂದಾಗಿದ್ದಾರೆ, ಕಾನೂನಿನಲ್ಲಿ ಏನು ತೀರ್ಮಾನವಾಗುತ್ತೋ, ಅಲ್ಲಿಯವರೆಗೆ ಯಥಸ್ಥಿತಿ ಕಾಪಾಡಿಕೊಳ್ಳಬೇಕೆಂದು ನಾವು ಅಧಿಕಾರಿಗಳನ್ನು ತಡೆದು ಸರ್ವೇ ಮಾಡಲು ಬಿಟ್ಟಿರುವುದಿಲ್ಲ, ಇಂತಹ ಪ್ರಸಂಗಗಳು ಇನ್ನು ಮುಂದೆ ತಾಲ್ಲೂಕಿನಲ್ಲಿ ಇಂತಹ ಸಂಗತಿಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕೆಂದು ತಿಳಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಲೋಕೇಶ್. ಕಾರ್ಯದರ್ಶಿ ಗಣೇಶ್, ಸುರೇಶ್,ರೈತ ಸಂಘದ ಸಂಚಾಲಕ ಅರುಣ್ ಕುಮಾರ್ .ಶರತ್ ಕುಮಾರ್, ಧನಂಜಯ್, ಆನಂದ್, ಕುಬೇರ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.