ಬೆಂಗಳೂರು: ಸಂಚಾರಿ ನಿಯಮಗಳ ಉಲ್ಲಂಘನೆ ದಂಡ ಪಾವತಿಗೆ ಮೂರನೇ ಬಾರಿಗೆ ಘೋಷಣೆಯಾಗಿರುವ ರಿಯಾಯಿತಿ ಸೌಲಭ್ಯಕ್ಕೆ ಉತ್ತಮ ಸ್ಪಂದನೆ ದೊರೆತಿದ್ದು, 2 ದಿನಗಳಲ್ಲಿ 15,000 ಪ್ರಕರಣಗಳು ಇತ್ಯರ್ಥಗೊಂಡು ಸರ್ಕಾರಕ್ಕೆ 50 ಲಕ್ಷಕ್ಕೂ ಹೆಚ್ಚು ದಂಡ ವಸೂಲಿಯಾಗಿದೆ.
ಹೈಕೋರ್ಟಿನ ಕಾನೂನು ಸೇವೆಗಳ ಪ್ರಾಧಿಕಾರದ ಸೂಚನೆ ಮೇರೆಗೆ ಇದೇ ವರ್ಷದ ಫೆಬ್ರವರಿ 11ರೊಳಗೆ ದಾಖಲಾಗಿದ್ದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಇತ್ಯರ್ಥಕ್ಕೆ ಶೇ.50ರಷ್ಟು ದಂಡ ರಿಯಾಯಿತಿಯನ್ನು ಘೋಷಿಸಲಾಗಿದೆ.
ಸೆಪ್ಟೆಂಬರ್ 9ರವರೆಗೂ ಈ ಸೌಲಭ್ಯದಲ್ಲಿ ಸಾರ್ವಜನಿಕರು ದಂಡ ಪಾವತಿಸಿ ಬಾಕಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ. ಇದು ಗುರುವಾರದಿಂದ ಜಾರಿಗೆ ಬಂದಿದೆ. ಮೊದಲ ದಿನವೇ 8,820 ಪ್ರಕರಣಗಳು ಇತ್ಯರ್ಥಗೊಂಡು 28,35,500 ಲಕ್ಷ ರೂ. ದಂಡ ವಸೂಲಿಯಾಗಿದ್ದು, ನಿನ್ನೆ 7,160 ಪ್ರಕರಣಗಳು ಇತ್ಯರ್ಥಗೊಂಡು 22,36,350 ಕೋಟಿ ರೂ. ದಂಡ ವಸೂಲಿಯಾಗಿದೆ. ಒಟ್ಟಾರೆ 15,980 ಪ್ರಕರಣಗಳು ಇತ್ಯರ್ಥಗೊಂಡಿವೆ. 50,71,850 ರೂ. ದಂಡ ಸಂಗ್ರಹವಾಗಿದೆ.