ಯಳಂದೂರು: ನಾಟ್ಯಗುರು ಶ್ರೀಮತಿ ಶೀಲಾ ರಾಮನಾಥ್ ಅವರ ಶಿಷ್ಯೆ ಕುಮಾರಿ ಮಾನ್ಯ ಮಹೇಶ್ ಇದೇ ಆಗಸ್ಟ್ ೧೦ ರ ಶನಿವಾರ ಸಂಜೆ ೫ ಗಂಟೆಗೆ ಮೈಸೂರಿನ ಕರ್ನಾಟಕ ಕಲಾಮಂದಿರದಲ್ಲಿ ಭರತನಾಟ್ಯ ರಂಗಪ್ರವೇಶ ಮಾಡಲಿದ್ದಾರೆ.
ಗೌರವ ಅತಿಥಿಗಳಾಗಿ ಅಯೋಧ್ಯಾ ಶ್ರೀ ರಾಮ ವಿಗ್ರಹ ಶಿಲ್ಪಿ ಮತ್ತು ಡಾಕ್ಟರೇಟ್ ಪ್ರಶಸ್ತಿ ಪುರಸ್ಕೃತ ಶ್ರೀ ಡಾ.ಅರುಣ್ ಯೋಗಿರಾಜ್ ಮತ್ತು ಸುಪ್ರಸಿದ್ದ ನಾಟ್ಯಾಚಾರ್ಯ, ದೇಶ ವಿದೇಶಗಳ ಗೌರವ ಪುರಸ್ಕೃತ, ಆಪ್ತಮಿತ್ರ ಚಲನಚಿತ್ರದ ಹೆಸರಾಂತ ನಟರಾದ ಶ್ರೀ ವಿದ್ವಾನ್ ಶ್ರೀಧರ್ ಜೈನ್ ರವರು ಆಗಮಿಸಲಿದ್ದಾರೆ.
ಬಹುಮುಖ ಪ್ರತಿಭೆಯಾದ ಮಾನ್ಯ ಮಹೇಶ್ ಅಮೇರಿಕಾದಲ್ಲಿ ಹುಟ್ಟಿದ್ದರೂ ಕೂಡ ಕನ್ನಡವನ್ನು ಓದಿ ಬರೆಯಲು ಕಲಿತಿದ್ದು, ಆರು ವರ್ಷದಿಂದಲೇ ವಯಸ್ಸಿನಲ್ಲಿಯೇ ಭರತನಾಟ್ಯ ಕಲಿಯಲು ಶುರು ಮಾಡಿ, ೧೨ ವರ್ಷಗಳ ನಿರಂತರ ಪರಿಶ್ರಮದಿಂದ ಪ್ರಸ್ತುತ ತಾಯ್ನಾಡಿನಲ್ಲಿ ರಂಗಪ್ರವೇಶ ಮಾಡಲಿದ್ದಾರೆ. ಇದಲ್ಲದೆ ಅಮೇರಿಕಾದಲ್ಲಿ ನಡೆದ ಬಾಲಿವುಡ್ ನೃತ್ಯ ಪ್ರದರ್ಶನ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾಗಿದ್ದು, ಅಮೆರಿಕಾದ ಫ್ರೀಡಂ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗಲೇ, ಶಾಲೆಯಲ್ಲಿ ಅಮ್ನೆಸ್ಟಿ ಇಂಟರ್‌ನ್ಯಾಷನಲ್, ಅಮೇರಿಕನ್ ಕ್ಯಾನ್ಸರ್ ಸೊಸೈಟಿ, ಅಮೇರಿಕನ್ ರೆಡ್‌ಕ್ರಾಸ್ ಚಾಪ್ಟರ್‍ಸ್ ಸಂಸ್ಥೆಗಳ ಸ್ಥಾಪಕಳಾಗಿ ಮತ್ತು ಅಧ್ಯಕ್ಷೆಯೂ ಆಗಿದ್ದಾರೆ.
ಡಿಇಸಿಎ ಬ್ಯುಸಿನೆಸ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಇದರ ಮೂಲಕ ತಾನು ಓದಿದ ಶಾಲೆಗೆ ಗೌರವ ತಂದು ಕೊಟ್ಟಿದ್ದಾರೆ.. ವಾಷಿಂಗ್ಟನ್ ಡಿಸಿ, ಮೇರಿಲ್ಯಾಂಡ್ ಮತ್ತು ವರ್ಜೀನಿಯಾ ಈ ಮೂರು ರಾಜ್ಯಗಳ ಟೀನ್ ಮಿಸ್ ಇಂಡಿಯಾ ಡಿಎವಿ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತಳಾಗಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಈಗ ವರ್ಜೀನಿಯ ಕಾಮನ್‌ವೆಲ್ತ್ ಯೂನಿವೆರ್ಸಿಟಿಯ ಪ್ರಿ-ಮೆಡಿಸಿನ್ ಟ್ರ್ಯಾಕ್ ನಲ್ಲಿ ಬೈಯೋಕೆಮೆಸ್ಟ್ರಿಯನ್ನು ವ್ಯಾಸಂಗ ಮಾಡುವ ಅರ್ಹತೆಯನ್ನು ಪಡೆದಿದ್ದು, ಮುಂದೆ ಕ್ಯಾನ್ಸರ್ ಗುಣಪಡಿಸುವ ವೈದ್ಯೆಯಾಗುವ ಕನಸು ಹೊಂದಿದ್ದಾಳೆ. ಮಾನ್ಯಳ ತಂದೆ ಮಹೇಶ್ ಮಹಾದೇವ ಇವರು ಮೂಲತಃ ಹಳೆಯ ಮೈಸೂರು ಜಿಲ್ಲೆಯ ಯಳಂದೂರಿನವರು. ತಮ್ಮ ಇಂಜಿನಿಯರಿಂಗ್ ವಿಧ್ಯಾಭ್ಯಾಸದ ನಂತರ ಅಮೇರಿಕಾದಲ್ಲಿ ಉದ್ಯೋಗ ಪಡೆದು ೨೪ ವರ್ಷಗಳಿಂದ ಅಲ್ಲಿಯೇ ಸೇವೆ ಸಲ್ಲಿಸುತ್ತಿದ್ದಾರೆ. ಕಾವೇರಿ ಕನ್ನಡ ಸಂಘದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಇದರ ಅಧ್ಯಕ್ಷರೂ ಆಗಿದ್ದರು. ತಾಯಿ ಭಾಗ್ಯ ಮಹೇಶ್, ಮಾನ್ಯಳ ತಾಯಿ ಇವರು ಮಹೇಶ್ ರನ್ನು ವಿವಾಹವಾದ ನಂತರ ಅಮೆರಿಕಾಗೆ ತೆರಳಿ, ೨೨ ವರ್ಷಗಳಿಂದಲೂ ಅಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಭರತನಾಟ್ಯ ಭಾರತೀಯರ ಸನಾತನ ಸಂಸ್ಕೃತಿ, ಈ ಪುರಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಸದುದ್ದೇಶದಿಂದ ಭಾಗ್ಯ ಮಹೇಶ್ ಮತ್ತು ಮಹೇಶ್ ಮಹಾದೇವರವರು ತಮ್ಮ ಇಬ್ಬರೂ ಮಕ್ಕಳನ್ನು ಭರತನಾಟ್ಯ ಕಲಾವಿದರನ್ನಾಗಿಸುವ ಕನಸು ಹೊತ್ತು ಕಾರ್ಯಪ್ರವೃತ್ತರಾದರು. ಇದಕ್ಕೆ ಅಮೇರಿಕಾದಲ್ಲಿ ಹೆಚ್ಚಿನ ಉತ್ತೇಜನ ಮತ್ತು ಅವಕಾಶಗಳು ದೊರೆಯಿತು. ಹಿರಿಯ ಮಗಳಾದ ಮಾನ್ಯ ತಂದೆ ತಾಯಿಯರ ಕನಸನ್ನು ನನಸು ಮಾಡಿದ್ದಾಳೆ. ಇದೇ ಆಗಸ್ಟ್ ೧೦ ರಂದು ಸಂಜೆ ೫:೦೦ ಗಂಟೆಗೆ ಮೈಸೂರಿನ ಕರ್ನಾಟಕ ಕಲಾಮಂದಿರದಲ್ಲಿ ನಡೆಯಲಿದ್ದು, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮದ ಯಶಸ್ಸಿಗೆ ಕಾರಣರಾಗಬೇಕೆಂದು ಅವರು ಪೋಷಕರು ಮನವಿ ಮಾಡಿದ್ದಾರೆ.