ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ಪಟ್ಟಣದಲ್ಲಿ ಸ್ವಾಭಿಮಾನದ ಶೌರ್ಯ ಸಂಗ್ರಾಮ ಭೀಮಾ ಕೋರೆಗಾoವ್ ವಿಜಯೋತ್ಸವದ ಪ್ರಯುಕ್ತ ಬೃಹತ್ ಮೆರವಣಿಗೆಯನ್ನು ನಡೆಸಲಾಯಿತು.
ಸಾಲಿಗ್ರಾಮ ಪಟ್ಟಣದ ಅಂಬೇಡ್ಕರ್ ನಗರದಲ್ಲಿನ ಶ್ರೀ ಹುಚ್ಚಮ್ಮ ತಾಯಿ ದೇವಸ್ಥಾನದಿಂದ ಡಬಲ್ ಟ್ಯಾಂಕ್, ರಾಮನಾಥಪುರ ರಸ್ತೆ ಮೂಲಕ ಮಹಾವೀರ ರಸ್ತೆಯಲ್ಲಿ ಮೆರವಣಿಗೆಯು ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಮೆರವಣಿಗೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಬುದ್ಧ ಹಾಗೂ ವಿಜಯೋತ್ಸವ ಬಗೆಗಿನ ವಿವಿಧ ಮಾದರಿಯ ಸ್ತಬ್ಧ ಚಿತ್ರಗಳು, ಕ್ರೇನ್ ನಲ್ಲಿ ಮೆರವಣಿಗೆ ಮೂಲಕ ಸಾಗಿದ ವಿಶೇಷ ಸ್ತಬ್ದ ಚಿತ್ರ ಸೇರಿದಂತೆ ತೆರೆದ ವಾಹನಗಳಲ್ಲಿ ಭವ್ಯ ಅಲಂಕೃತವಾಗಿ ಸಾಗಿದ ಸ್ತಬ್ಧ ಚಿತ್ರಗಳು ಸಾರ್ವಜನಿಕರ ಗಮನ ಸೆಳೆಯುವುದರಲ್ಲಿ ಯಶಸ್ವಿಯಾದವು.
ಮೆರವಣಿಗೆಯುದ್ಧಕ್ಕೂ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಯುವ ಸಮೂಹ ಜಯ ಘೋಷಣೆಗಳನ್ನು ಮೊಳಗಿಸುತ್ತಾ ಡಿಜೆ ಸಾಂಗ್ ಗಳಿಗೆ ನೃತ್ಯ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತಂದಿದ್ದು ವಿಶೇಷವಾಗಿತ್ತು.
ಮೆರವಣಿಗೆಗೂ ಮುನ್ನ ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಕೋರೆಗಾoವ್ ವಿಜಯೋತ್ಸವದ ಸ್ತಂಭಚಿತ್ರ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.
ವಿಜಯೋತ್ಸವದ ಅಂಗವಾಗಿ ಪಟ್ಟಣದ ಪ್ರಮುಖ ರಸ್ತೆಗಳೆಲ್ಲ ನೀಲಿ ಬಣ್ಣದ ಬಾವುಟಗಳು ಹಾಗೂ ಬಂಟಿಂಗ್ಸ್ ಗಳೊಂದಿಗೆ ರಾರಾಜಿಸುತ್ತಿದ್ದವು.
ಕಾರ್ಯಕ್ರಮದಲ್ಲಿ ಪಟ್ಟಣದ ಅಂಬೇಡ್ಕರ್ ನಗರದವರು ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಜನಪ್ರತಿನಿಧಿಗಳು, ಮುಖಂಡರುಗಳು, ಮಹಿಳಾ ಸಂಘಟನೆಗಳವರು, ಯುವಕರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಎಲ್ಲಾ ಸಮುದಾಯದವರು ಪಾಲ್ಗೊಂಡ್ಡಿದ್ದರು.