ಪಿರಿಯಾಪಟ್ಟಣ: ತಾಲೂಕಿನ ಭುವನಹಳ್ಳಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಬಾಲಕರ ವಿಭಾಗದ ಖೊಖೊ ಸ್ಪರ್ಧೆಯಲ್ಲಿ ತಾಲೂಕು ಮಟ್ಟದಲ್ಲಿ ಜಯಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಹಿನ್ನೆಲೆ ಗ್ರಾಮದ ದಿವಂಗತ ವೆಂಕಟೇಗೌಡರ ಸ್ಮರಣಾರ್ಥ ಅವರ ಪುತ್ರ ಬಿ.ವಿ ಜಯಣ್ಣ ಅವರು ಕ್ರೀಡಾಪಟುಗಳಿಗೆ ಟ್ರ್ಯಾಕ್ ಸೂಟ್ ವಿತರಿಸಿದರು.
ಈ ವೇಳೆ ಬಿ.ವಿ ಜಯಣ್ಣ ಅವರು ಮಾತನಾಡಿ ಯಾವುದೇ ವ್ಯಕ್ತಿ ಸಾಧನೆ ಗುರಿ ತಲುಪಲು ಮಾರ್ಗದರ್ಶಕರು ಹಾಗೂ ತರಬೇತುದಾರರ ಕಾರ್ಯ ಅಪಾರವಾಗಿದೆ, ನಗರ ಪ್ರದೇಶದ ಖಾಸಗಿ ಶಾಲೆಯಂತೆ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಶೈಕ್ಷಣಿಕ ಹಾಗೂ ಕ್ರೀಡಾ ಪ್ರಗತಿಯಲ್ಲಿ ಹೆಚ್ಚಿನ ಸಾಧನೆ ತೋರುತ್ತಿರುವುದು ಬದಲಾವಣೆಯ ದಿಕ್ಸೂಚಿಯಾಗಿದೆ ಎಂದರು.
ಶಿಕ್ಷಣಾಸಕ್ತರಾದ ನಾಗೇಂದ್ರ ಅವರು ಮಾತನಾಡಿ ಗ್ರಾಮಾಂತರ ಪ್ರದೇಶದ ಪ್ರತಿಭೆಗಳ ಪ್ರೋತ್ಸಾಹಕ್ಕೆ ದಾನಿಗಳ ಸಹಕಾರ ಸಿಕ್ಕಾಗ ಮತ್ತಷ್ಟು ಸಾಧನೆ ಮಾಡಲು ಸಹಕಾರಿಯಾಗುತ್ತದೆ, ಯಾವುದೇ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ಆಸಕ್ತಿ ಇಟ್ಟು ಕಲಿತಾಗ ಮಾತ್ರ ಸಾಧನೆಯ ಗುರಿ ತಲುಪಬಹುದು, ಪ್ರಗತಿ ಮತ್ತು ಪ್ರತಿಭೆಯನ್ನು ಕಾಪಾಡಿಕೊಂಡು ಹೋದಾಗ ಮಾತ್ರ ಹೆಚ್ಚಿನ ಸಾಧನೆ ಸಾದ್ಯ ಎಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹೇಮಪ್ರಭ ಅವರು ಮಾತನಾಡಿ ಗ್ರಾಮಾಂತರ ಪ್ರದೇಶ ವಿದ್ಯಾರ್ಥಿಗಳು ಶೈಕ್ಷಣಿಕ ಹಾಗೂ ಕ್ರೀಡಾ ಪ್ರಗತಿಯಲ್ಲಿ ಸಾಧನೆ ತೋರುತ್ತಿರುವುದು ಶ್ಲಾಘನೀಯ ಇದಕ್ಕೆ ಕಾರಣರಾದ ಪ್ರತಿಯೊಬ್ಬರಿಗೂ ಧನ್ಯವಾದ ಹೇಳಿದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬೆಕ್ಕರೆ ಸತೀಶ್ ಆರಾಧ್ಯ ಮಾತನಾಡಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರೋತ್ಸಾಹಿಸಿದಾಗ ಮತ್ತಷ್ಟು ಸಾಧನೆಗೆ ಸಹಕಾರಿಯಾಗುತ್ತದೆ, ಈ ನಿಟ್ಟಿನಲ್ಲಿ ಬಿ.ವಿ ಜಯಣ್ಣ ಅವರ ಕಾರ್ಯ ಇತರರಿಗೆ ಮಾದರಿಯಾಗಿದ್ದು ಮುಂಬರುವ ದಿನಗಳಲ್ಲಿ ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ವಿದ್ಯಾರ್ಥಿಗಳು ಮತ್ತಷ್ಟು ಸಾಧನೆ ಮಾಡುವಂತಾಗಲಿ ಎಂದು ಶುಭ ಕೋರಿದರು.
ಈ ಸಂದರ್ಭ ಶಾಲಾಭಿವೃದ್ಧಿ ಸಮಿತಿ ಸದಸ್ಯ ನಾಗರಾಜ್, ತರಬೇತುದಾರ ಪ್ರವೀಣ್ ಮುಖ್ಯ ಶಿಕ್ಷಕರಾದ ಎಸ್.ಜೆ ವಿಜಯ್ ಕುಮಾರ್, ಶಿಕ್ಷಕರಾದ ತಿಪ್ಪೇಸ್ವಾಮಿ, ಶಿವಶಂಕರ್, ಅನುಪಮಾ, ತ್ರಿವೇಣಿ, ಲಕ್ಷ್ಮಿ, ದಿವ್ಯ, ನರಸಿಂಹಮೂರ್ತಿ, ದಿನೇಶ್ ಹಾಗೂ ವಿದ್ಯಾರ್ಥಿಗಳು ಇದ್ದರು.