ಹುಬ್ಬಳ್ಳಿ: ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ ದಂಪತಿ ಇಂದು ಬುಧವಾರ ಸಚಿವ ಪ್ರಹ್ಲಾದ್ ಜೋಶಿ ನಿವಾಸಕ್ಕೆ ಭೇಟಿಯಾಗಿದ್ದಾರೆ. ಎಲೆಕ್ಷನ್ ಮುಗಿದ ನಂತರ ಹರ್ಷಿಕಾ ದಂಪತಿ ಮೇಲಿನ ಹಲ್ಲೆಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಹರ್ಷಿಕಾ ತಿಳಿಸಿದ್ದಾರೆ.
ಪ್ರಹ್ಲಾದ್ ಜೋಶಿರನ್ನು ಭೇಟಿಯಾಗಿ ತಮ್ಮ ಮೇಲಿನ ಹಲ್ಲೆ ಬಗ್ಗೆ ವಿವರಿಸಿದ್ದಾರೆ. ದೌರ್ಜನ್ಯದ ವಿಚಾರ ತಿಳಿದ್ಮೇಲೆ ಸಚಿವ ಪ್ರಹ್ಲಾದ್ ಜೋಶಿ ಕಾನೂನು ಕ್ರಮ ಜರುಗಿಸೋದಾಗಿ ದಂಪತಿಗೆ ಭರವಸೆ ನೀಡಿದ್ದಾರೆ. ನಿಮ್ಮ ಜೊತೆ ನಾವಿದ್ದೇವೆ ಎಂದು ಧೈರ್ಯ ತುಂಬಿದ್ದಾರೆ. ಭೇಟಿಯ ಬಳಿಕ ಬಗ್ಗೆ ಹರ್ಷಿಕಾ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ನಮ್ಮ ಕುಟುಂಬ ಯಾರ ತಂಟೆಗೂ ಹೋಗದೆ ನಮ್ಮ ಪಾಡಿಗೆ ನಾವಿದ್ದೇವೆ. ಬೆಂಗಳೂರಿನ ರೆಸ್ಟೋರೆಂಟ್‌ಗೆ ಹೋದಾಗ ಕೆಲವರು ತೊಂದರೆ ಮಾಡಿದ್ದಾರೆ. ಕನ್ನಡ ಮಾತಾಡಿದ್ದಕ್ಕೆ ನಮ್ಮ ಜೊತೆ ಜಗಳ ತೆಗೆದಿದ್ದಾರೆ. ನಮ್ಮ ರಾಜ್ಯದಲ್ಲಿ ನಾವು ಕನ್ನಡ ಮಾತನಾಡಿದ್ದೇ ತಪ್ಪಾ ಎಂದು ನಟಿ ಪ್ರಶ್ನಿಸಿದ್ದಾರೆ. ಅಂದು ಸಾಕಷ್ಟು ಜನರು ಜಮಾಯಿಸಿ ದೌರ್ಜನ್ಯ ಮಾಡಿದ್ದರು. ಕತ್ತಲ್ಲಿದ್ದ ಚೈನ್ ಕಿತ್ತುಕೊಳ್ಳಲು ಪ್ರಯತ್ನಿಸಿದ್ದರು. ಸೆಲೆಬ್ರಿಟಿಗಳಿಗೆ ಹೀಗಾದರೆ ಜನಸಾಮಾನ್ಯರ ಸ್ಥಿತಿಯೇನು ಎಂದ ಹರ್ಷಿಕಾ ಬೇಸರ ಹೊರಹಾಕಿದ್ದಾರೆ.
ಭುವನ್ ಪೊನ್ನಣ್ಣ ಪ್ರತಿಕ್ರಿಯಿಸಿ, ಜೋಶಿ ಸರ್‌ಗೆ ಭೇಟಿಯಾಗಿ ನಮಗಾದ ತೊಂದರೆ ಬಗ್ಗೆ ಹೇಳಿದ್ದೇವೆ. ಎಲೆಕ್ಷನ್ ಆದ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಜೋಶಿ ಸರ್ ಭೇಟಿಯಾಗಿ ನಮಗೆ ಧೈರ್ಯ ಬಂದಿದೆ. ಬೆಂಗಳೂರು ಪೊಲೀಸರು ಸಮರ್ಪಕ ತನಿಖೆ ಮಾಡುತ್ತಿದ್ದಾರೆ. ಆರೋಪಿಗಳನ್ನು ಗುರುತಿಸಿದ್ದು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಈ ಪ್ರಕರಣಕ್ಕೆ ಪೊಲೀಸರು ಸಾಕಷ್ಟು ಬೆಂಬಲ ನೀಡಿದ್ದಾರೆ ಎಂದು ಮಾತನಾಡಿದ್ದಾರೆ.