ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ನಟ ಭುವನ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕಳೆದ ೧೨ ವರ್ಷಗಳಿಂದ ಪ್ರೇಮ ಬಂಧದಲ್ಲಿದ್ದ ಜೋಡಿ ಈಗ ವೈವಾಹಿಕ ಬಂಧಕ್ಕೆ ಒಳಗಾಗಿದೆ. ಸ್ಯಾಂಡಲ್ ವುಡ್ ನಲ್ಲಿ ಹರ್ಷಿಕಾ ಹಾಗೂ ಭುವನ್ ಇಬ್ಬರು ಚಿರಪರಿಚತರೇ. ತಮ್ಮ ಪ್ರೀತಿಯ ವಿಚಾರವನ್ನು ಮೊದಲು ಇಬ್ಬರು ಎಲ್ಲೂ ಕೂಡ ರಟ್ಟು ಮಾಡಿಲ್ಲ. ಕೆರಿಯರ್ ನಲ್ಲಿ ಫೋಕಸ್ ಆಗುವ ನಿಟ್ಟಿನಲ್ಲಿ ಈ ನಿರ್ಧಾರಕ್ಕೆ ಅವರು ಬಂದಿದ್ದರು ಎಂದು ನಟಿ ಹರ್ಷಿಕಾ ಈ ಹಿಂದೆ ಹೇಳಿದ್ದರು.
ಮದುವೆಯ ಶಾಸ್ತ್ರದ ಮುನ್ನವೇ ನಟಿ ಹರ್ಷಿಕಾ ಭುವನ್ ಪೊನ್ನಣ್ಣ ಅವರ ಗೃಹ ಪ್ರವೇಶ (ಊರ್ಕುಡುವ ಶಾಸ್ತ್ರ) ಮಾಡಿದ ಫೋಟೋ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಮನೆಯನ್ನು ಹರ್ಷಿಕಾ ಅವರಿಗಾಗಿಯೇ ನಿರ್ಮಿಸಲಾಗಿದೆ.
ಅದರಂತೆ ಗುರುವಾರ(ಆ.೨೪ ರಂದು) ವಿರಾಜಪೇಟೆಯ ಅಮ್ಮತ್ತಿ ಕೊಡವ ಸಮಾಜದಲ್ಲಿ ಕೊಡವ ಸಂಪ್ರದಾಯದ ಅನುಸಾರವಾಗಿ ಗುರು ಹಿರಿಯರ ಸಮ್ಮುಖದಲ್ಲಿ ಹರ್ಷಿಕಾ ಭುವನ್ ಅವರ ವಿವಾಹ ಶಾಸ್ತ್ರಗಳು ನೆರವೇರಿದೆ.
ಫ್ಯಾಶನ್ ಶೋವೊಂದರಲ್ಲಿ ಮೊದಲ ಬಾರಿಗೆ ಹರ್ಷಿಕಾ ಭುವನ್ ಭೇಟಿಯಾಗಿದ್ದರು. ಮೊದಲಿಗೆ ಭುವನ್ ಹರ್ಷಿಕಾ ಅವರಿಗೆ ಪ್ರಪೋಸ್ ಮಾಡಿದ್ದರು. ಈ ವೇಳೆ ಹರ್ಷಿಕಾ ಅವರಿಗೆ ಉತ್ತರಿಸಲು ಒಂದೇ ದಿನದ ಅವಕಾಶ ನೀಡಿದ್ದರು. ಒಂದೇ ದಿನದಲ್ಲಿ ಹರ್ಷಿಕಾ, ಭುವನ್ ಪ್ರೀತಿಯ ಪ್ರಪೋಸಲ್‌ಗೆ ಓಕೆ ಎಂದಿದ್ದರು.
ಪಿಯುಸಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ನಟಿ ಹರ್ಷಿಕಾ ಚಿಟ್ಟೆ ಎಂದೇ ಖ್ಯಾತರಾಗಿದ್ದಾರೆ. ಚಾರ್ ಮಿನಾರ್, ರೇ, ಜಾಕಿ, ಉಪೇಂದ್ರ ಮತ್ತೆ ಬಾ, ಕಾಸಿನ ಸರ ಮುಂತಾದ ಅನೇಕ ಚಿತ್ರದಲ್ಲಿ ಹರ್ಷಿಕಾ ನಟಿಸಿದ್ದಾರೆ. ಇನ್ನು ರಿಯಾಲಿಟಿ ಶೋದಿಂದ ಮಿಂಚಿದ ಭುವನ್ ಕುಚ್ಚಿಕು ಕುಚ್ಚಿಕು, ರಾಂಧವ ಸಿನಿಮಾದಲ್ಲಿ ನಟಿಸಿದ್ದಾರೆ.