ನವದೆಹಲಿ : ಬಿಡದಿ ಟೌನ್ಶಿಪ್ಗಾಗಿ ಜಂಟಿ ಮಾಪನ ಸಮೀಕ್ಷೆಗೆ ತೆರಳಿದ್ದ ಅಧಿಕಾರಿಗಳಿಗೆ ರೈತ ಮಹಿಳೆಯರು ಪೊರಕೆಯಿಂದ ಹಲ್ಲೆ ನಡೆಸಿದ ಘಟನೆ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಬಿಡದಿ ಟೌನ್ಶಿಪ್ ಹೆಸರಿನಲ್ಲಿ ರೈತರ ಜಮೀನು ಕಸಿದುಕೊಳ್ಳಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದ ಅವರು, ಸರ್ಕಾರದ ಕ್ರಮ ಅತಿರೇಕಕ್ಕೆ ತಲುಪಿರುವುದರಿಂದ ರೈತ ಮಹಿಳೆಯರು ಆಕ್ರೋಶ ವ್ಯಕ್ತಪಡಿಸುವಂತಾಗಿದೆ. ಸರ್ಕಾರ ಇನ್ನಾದರೂ ರೈತರ ಸಮಸ್ಯೆಗಳತ್ತ ಗಮನ ಹರಿಸಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಬಿಡದಿ ರೈತರ ಹೋರಾಟ ಕೇವಲ ಸಾಮಾನ್ಯ ಪ್ರತಿಭಟನೆಯಲ್ಲ. ಅನ್ನ ನೀಡುವ ಭೂಮಿಯನ್ನು ಉಳಿಸಿಕೊಳ್ಳಲು ರೈತರು ನಡೆಸುತ್ತಿರುವ ಹೋರಾಟವಾಗಿದೆ ಎಂದು ಜೋಶಿ ಅಭಿಪ್ರಾಯಪಟ್ಟರು. ಅಲ್ಲದೆ ರೈತರ ಬಗ್ಗೆ ಕಾಳಜಿ ಇಲ್ಲದೆ ರಾಜ್ಯ ಸರ್ಕಾರ ಸರ್ವಾಧಿಕಾರಿ ಧೋರಣೆಯಲ್ಲಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದ ಅವರು, ರೈತರ ಒಪ್ಪಿಗೆಯಿಲ್ಲದೆ ಅವರ ಜೀವನಾಧಾರವಾಗಿರುವ ಭೂಮಿಯನ್ನು ಪಡೆದು ಮಾಡುವ ಟೌನ್ಶಿಪ್ ಅಭಿವೃದ್ಧಿ ಯಾರಿಗಾಗಿ? ಎಂದು ಪ್ರಶ್ನಿಸಿದರು.
ಶಾಂತಿಯುತ ಜೀವನ ನಡೆಸುತ್ತಿರುವ ರೈತರನ್ನು ಹೆದರಿಸಿ, ಬೆದರಿಸಿ ಭೂಮಿ ವಶಪಡಿಸಿಕೊಳ್ಳುವ ಸರ್ಕಾರದ ಕ್ರಮ ಖಂಡನೀಯ ಎಂದು ಜೋಶಿ ಹೇಳಿದರು. ಪೊಲೀಸ್ ಬಲ ಬಳಸಿ ರೈತರ ಜಮೀನು ಕಿತ್ತುಕೊಳ್ಳಬಹುದು ಎಂದು ಸರ್ಕಾರ ಭಾವಿಸಿದ್ದರೆ ಅದು ತಪ್ಪು ಕಲ್ಪನೆ ಎಂದು ಎಚ್ಚರಿಕೆ ನೀಡಿದರು.
ಬಿಡದಿ ರೈತರ ಹೋರಾಟ ಕೇವಲ ಒಂದು ಪ್ರದೇಶಕ್ಕೆ ಸೀಮಿತವಲ್ಲ. ಇದು ರಾಜ್ಯದ ಜನರ ಆಕ್ರೋಶದ ಪ್ರತಿಬಿಂಬವಾಗಿದೆ. ರೈತರ ಭೂಮಿ ಅವರ ಹಕ್ಕು. ಅವರ ಒಪ್ಪಿಗೆಯಿಲ್ಲದೆ ಭೂಮಿ ಪಡೆಯುವುದು ಸರಿಯಲ್ಲ. ರೈತರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.



