ತುಮಕೂರು: ತುಮಕೂರು ಲೋಕಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಗೆ ಮಾಜಿ ಹಾಗೂ ಹಾಲಿ ಸಂಸದರ ನಡುವೆ ಬಿಗ್ ಫೈಟ್ ನಡೆದಿದೆ.
ಸಭೆಯೊಂದರಲ್ಲಿ ಹಾಲಿ ಸಂಸದ ಜಿ.ಎಸ್ ಬಸವರಾಜು ವಿ.ಸೋಮಣ್ಣ ಹೆಸರು ಹೇಳಿದ್ದರು. ನನ್ನ ಸರದಿ ಮುಗಿದಿದೆ ಮುಂದೆ ವಿ ಸೋಮಣ್ಣ ತುಮಕೂರಿನಿಂದ ಲೋಕಸಭೆಗೆ ಸ್ಪರ್ಧೆ ಮಾಡ್ತಾರೆ. ವೀರಶೈವ ಸಮಾಜ ಅವರಿಗೆ ಸಹಾಯ ಮಾಡ್ಬೇಕು ಎಂದು ಹೇಳಿಕೆ ನೀಡಿದ್ದರು.
ಜಿ.ಎಸ್ ಬಸವರಾಜ್ ಮಾತನಾಡಿದ್ದ ಆಡಿಯೋ ಎಲ್ಲೆಡೆ ವೈರಲ್ ಆಗಿತ್ತು.
ಈ ಬೆನ್ನಲ್ಲೆ ಮಾಜಿ ಸಂಸದ ಮುದ್ದಹನುಮೇಗೌಡ ಅವರು, ನಾನು ಕೂಡ ತುಮಕೂರು ಲೋಕಸಭೆ ಚುನಾವಣೆಯ ಟಿಕೆಟ್ ಆಕಾಂಕ್ಷಿ ಎಂದು ಹೇಳಿಕೆ ನೀಡಿದ್ದಾರೆ.
ನಾನು ತುಮಕೂರಿನಿಂದ ಲೋಕಸಭೆಗೆ ಸ್ಪರ್ಧೆ ಮಾಡುವುದು ಖಚಿತ. ಪಕ್ಷ ನನಗೆ ಟಿಕೆಟ್ ಕೊಡುವ ಭರವಸೆಯಿದೆ. ಟಿಕೆಟ್ ಗಾಗಿ ನಾನು ತಂತ್ರ ಮಾಡಲ್ಲ ಎಂದು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿರುವ ಮಾಜಿ ಸಂಸದ ಮುದ್ದಹನುಮೇಗೌಡ ತಿಳಿಸಿದದಾರೆ.
ಚುನಾವಣೆ ಇನ್ನೂ ವರ್ಷ ಇರುವಾಗಲೇ ಟಿಕೆಟ್ ಗಾಗಿ ಫೈಟ್ ನಡೆಯುತ್ತಿದ್ದು, ಸದ್ಯ ಹಾಲಿ ಹಾಗೂ ಮಾಜಿ ಸಂಸದರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ ಎನ್ನಲಾಗಿದೆ.
ಹಾಲಿ ಸಂಸದ ಜಿ.ಎಸ್ ಬಸವರಾಜ್, ವಿ. ಸೋಮಣ್ಣಗೆ ಟಿಕೆಟ್ ಕೊಡಿಸಲು ಲಾಭಿ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇಬ್ಬರ ಕಿತ್ತಾಟದಲ್ಲಿ ಪಕ್ಷ ಯಾರಿಗೆ ಮಣೆ ಹಾಕಲಿದೆ ಎಂಬುದು ಕಾದು ನೋಡಬೇಕಿದೆ.