ಚಾಮರಾಜನಗರ: ಕೊಳ್ಳೇಗಾಲ ಪಟ್ಟಣದಲ್ಲಿ ಜನವರಿ ೨೨ರಂದು ಆಯೋಜನೆಯಾಗಿರುವ ಬೃಹತ್ ಆರೋಗ್ಯ ಶಿಬಿರಕ್ಕೆ ಅಗತ್ಯವಿರುವ ಎಲ್ಲಾ ಸಿದ್ದತಾ ಕಾರ್ಯಗಳನ್ನು ತ್ವರಿತವಾಗಿ ಆರಂಭಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಸೂಚನೆ ನೀಡಿದರು. ಕೊಳ್ಳೇಗಾಲ ಪಟ್ಟಣದ ಎಂ.ಜಿ.ಎಸ್.ವಿ ಕಾಲೇಜು ಆವರಣದಲ್ಲಿ ಜನವರಿ ೨೨ರಂದು ಬೃಹತ್ ಆರೋಗ್ಯ ಶಿಬಿರ ಏರ್ಪಡಾಗಿದೆ. ಜಿಲ್ಲೆಗೆ ಆರೋಗ್ಯ ಶಿಬಿರ ಆಯೋಜಿಸುವ ಅವಕಾಶ ದೊರೆತಿದ್ದು ಹೆಚ್ಚಿನ ಜನರಿಗೆ ಈ ಕಾರ್ಯಕ್ರಮ ತಲುಪಬೇಕಿದೆ. ಈ ನಿಟಿನಲ್ಲಿ ಪೂರ್ವ ಸಿದ್ದತೆಗಳೊಂದಿಗೆ ಎಲ್ಲಾ ಕಾರ್ಯಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಯವರು ತಿಳಿಸಿದರು.
ಆರೋಗ್ಯ ತಪಾಸಣಾ ಶಿಬಿರಕ್ಕೆ ಜಿಲ್ಲೆಯ ಎಲ್ಲ ಕಡೆಯಿಂದ ಜನರು ಬರಬೇಕು. ಕಾಡಂಚಿನ, ಹಾಡಿಗಳು, ಪೋಡು, ಮತ್ತಿತ್ತರ ಪ್ರದೇಶಗಳಿಂದ ಬಂದು ಆರೋಗ್ಯ ಶಿಬಿರದ ಪ್ರಯೋಜನ ಪಡೆಯಬೇಕು. ಇದಕ್ಕಾಗಿ ಸೂಕ್ತ ವಾಹನಗಳ ವ್ಯವಸ್ಥೆ ಮಾಡಬೇಕಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಿ ಕರೆತರಬೇಕು ಎಂದರು.
ಆರೋಗ್ಯ ಶಿಬಿರಕ್ಕೆ ಬರುವವರು ನೊಂದಾಯಿಸಿಕೊಳ್ಳಲು ಆಯಾ ಗ್ರಾಮ ವ್ಯಾಪ್ತಿಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಅನುಕೂಲ ಸ್ಥಳಗಳಲ್ಲಿ ವ್ಯವಸ್ಥೆ ಮಾಡಬೇಕು. ನೇರವಾಗಿಯು ಶಿಬಿರಕ್ಕೆ ಬಂದು ನೊಂದಾಯಿಸಲು ಸಹ ಅನುಕೂಲ ಮಾಡಿಕೊಡಬೇಕು. ಆಯಾ ತಾಲೂಕು ಆರೋಗಯ ಅಧಿಕಾರಿಗಳು ಈ ಬಗ್ಗೆ ಜವಾಬ್ದಾರಿ ವಹಿಸಬೇಕಿದೆ. ಎಲ್ಲ ವರ್ಗದ ಜನರು ಆರೋಗ್ಯ ಶಿಬಿರದಲ್ಲಿ ಭಾಗವಹಿಸಲು ವ್ಯವಸ್ಥೆಗಳನ್ನು ಯಾವುದೇ ಕೊರತೆಯಾಗದಂತೆ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಆರೋಗ್ಯ ತಪಾಸಣೆ, ಚಿಕಿತ್ಸೆ, ಸಲಹೆ, ಔಷಧ ವಿತರಣೆಗೆ ಹೆಚ್ಚು ಕೌಂಟರ್‍ಗಳನ್ನು ಶಿಬಿರದಲ್ಲಿ ತೆರೆಯಬೇಕು. ತಜ್ಞರ ನಿಯೋಜನೆ, ವಿದ್ಯುತ್ ಪೂರೈಕೆ, ತಾಂತ್ರಿಕ ಉಪಕರಣಗಳ ಅಳವಡಿಕೆ, ಕಂಪ್ಯೂಟರ್, ಇನ್ನಿತರ ಅಗತ್ಯ ಪರಿಕರಗಳನ್ನು ಸಿದ್ದವಾಗಿಟ್ಟುಕೊಳ್ಳಬೇಕು. ಶಿಬಿರದಲ್ಲಿಯೇ ಎ.ಬಿ.ಆರ್.ಕೆ ಕಾರ್ಡ್‌ಗಳನ್ನು ನೀಡುವ ವ್ಯವಸ್ಥೆಯು ಇರಬೇಕು. ಜನರ ಮಾಹಿತಿಗೆ ಸೂಚನ ಫಲಕಗಳು ಅಳವಡಿಕೆಯಾಗಬೇಕು ಎಂದರು. ಆರೋಗ್ಯ ಶಿಬಿರದಲ್ಲಿ ಊಟ, ಉಪಹಾರ, ಕುಡಿಯುವ ನೀರು, ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಬೇಕು. ದೊಡ್ಡ ಪ್ರಮಾಣದಲ್ಲಿ ಶಿಬಿರ ಆಯೋಜನೆಯಾಗುತ್ತಿರುವುದರಿಂದ ಪರಿಪೂರ್ಣವಾಗಿ ವ್ಯವಸ್ಥೆಗಳು ಇರಬೇಕು. ಬೃಹತ್ ಆರೋಗ್ಯ ಶಿಬಿರ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.