ಮೆಲ್ಬೋರ್ನ್: ಭಾರತದ ಹಿರಿಯ ಟೆನಿಸ್ ಆಟಗಾರ ಕನ್ನಡಿಗ ರೋಹನ್ ಬೋಪಣ್ಣ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿಪುರುಷರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಜಿದ್ದಾಜಿದ್ದಿನ ಪುರುಷರ ಡಬಲ್ಸ್ ಫೈನಲ್ ಪಂದ್ಯದಲ್ಲಿ ರೋಹನ್ ಬೋಪಣ್ಣ ಮತ್ತು ಅವರ ಜತೆಗಾರ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಸೇರಿಕೊಂಡು ಇಟಲಿಯ ಸಿಮೋನ್ ಬೊಲೆಲ್ಲಿ-ಆಯಂಡ್ರಿಯಾ ವಸಸ್ಸೊರಿ ವಿರುದ್ಧ ೭-೬(೭-೦), ೭-೫ ನೇರ ಸೆಟ್‌ಗಳಿಂದ ಗೆಲುವು ಸಾಧಿಸಿದರು.
ಆ ಮೂಲಕ ಪುರುಷರ ಡಬಲ್ಸ್ ಫೈನಲ್ ಪಂದ್ಯದಲ್ಲಿ ಗೆದ್ದು ಚೊಚ್ಚಲ ಆಸ್ಟ್ರೇಲಿಯಾ ಓಪನ್ ಪ್ರಶಸ್ತಿ ಎತ್ತಿ ಹಿಡಿದಿದ್ದು, ಓಪನ್ ಯುಗದಲ್ಲಿ ಗ್ರ್ಯಾನ್ ಸ್ಲಾಮ್ ಟ್ರೋಫಿ ಗೆದ್ದ ಅತಿ ಹಿರಿಯ ಟೆನಿಸ್ ಆಟಗಾರ ಎಂಬ ಕೀರ್ತಿಗೆ ರೋಹನ್ ಬೋಪಣ್ಣ ಪಾತ್ರರಾಗಿದ್ದಾರೆ. ಅಂತೆಯೇ ಇದು ರೋಹನ್ ಬೋಪಣ್ಣಗೆ ಒಲಿದ ೨ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯಾಗಿದ್ದು, ಇದಕ್ಕೂ ಮುನ್ನ ಅವರು ೨೦೧೭ರಲ್ಲಿ ಫ್ರೆಂಚ್ ಓಪನ್ ಟೂರ್ನಿಯ ವಿಶ್ರ ಡಬಲ್ಸ್‌ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು.
ಅಂದು ಕೆನಡಾದ ಗ್ಯಾಬ್ರಿಯೆಲಾ ಡಬ್ರೊವೊಸ್ಕಿ ಜತೆಗೂಡಿ ಆಡುವ ಮೂಲಕ ಈ ಸಾಧನೆ ಮಾಡಿದ್ದರು. ೨೦೧೩ ಮತ್ತು ೨೦೨೩ರಲ್ಲಿ ಅಮೆರಿಕ ಓಪನ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದರೂ ಇಲ್ಲಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.
ಅತ್ಯಂತ ಹಿರಿಯ ಆಟಗಾರ: ೪೩ ವಯಸ್ಸಿನ ಬೋಪಣ್ಣ ಕೊಡಗು ಮೂಲದವರಾಗಿದ್ದು, ವಿಶ್ವದ ನಂ.೧ ಪುರುಷರ ಡಬಲ್ಸ್ ಆಟಗಾರ ಎನಿಸಿಕೊಂಡಿರುವ ಅವರು ಶ್ರೇಯಾಂಕಗಳನ್ನು ನವೀಕರಿಸಿದಾಗ ಕ್ರೀಡಾ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಳ್ಳಲಿದ್ದಾರೆ. ಗುರುವಾರ ನಡೆದಿದ್ದ ಪುರುಷರ ಡಬಲ್ಸ್‌ನ ಸೆಮಿಫೈನಲ್ ಪಂದ್ಯದಲ್ಲಿ ಇಂಡೋ-ಆಸೀಸ್ ಜೋಡಿ ರೋಚಕ ೩ ಸೆಟ್‌ಗಳ ಕಾದಾಟದಲ್ಲಿ ಥಾಮಸ್ ಮಚಾಕ್ ಮತ್ತು ಜಾಂಗ್ ಝಿಶೆನ್ ಜೋಡಿಯನ್ನು ೬-೩ ೩-೬ ೭-೬ (೧೦-೭) ಸೋಲಿಸಿ ಫೈನಲ್?ಗೆ ಲಗ್ಗೆಯಿಟ್ಟಿದ್ದರು. ಫೈನಲ್‌ನಲ್ಲಿಯೂ ದಿಟ್ಟ ಪ್ರದರ್ಶನ ತೋರುವ ಮೂಲಕ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾದರು.