ಚಾಮರಾಜನಗರ: ಭತ್ತ ಕಟಾವು ಮಾಡುವ ಯಂತ್ರದ ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ನಾಲ್ವರು ದಾರುಣವಾಗಿ ಮೃತಪಟ್ಟ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಜಿನಕನಹಳ್ಳಿ ಬಳಿ ನಡೆದಿದೆ.
ಲಾರಿಗೆ ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಬಾಲಕ ಗಾಯಗೊಂಡಿದ್ದು, ಚಿಕಿತ್ಸೆಗೆ ಕೊಳ್ಳೇಗಾಲದ ಸಿಮ್ಸ್ ಆಸ್ಪತ್ರೆಗೆ ಕರೆತರಲಾಗುತ್ತಿತ್ತು. ಆದರೆ ಆತನೂ ಮಾರ್ಗ ಮಧ್ಯೆ ಅಸುನೀಗಿದ್ದಾನೆ.
ಸಂತೋಷ್(೩೨), ಸೌಮ್ಯ (೨೭), ನಿತ್ಯಸಾಕ್ಷಿ (೪) ಅಭಿ (೯) ಮೃತ ದುರ್ದೈವಿಗಳು.
ಮೃತಪಟ್ಟವರೆಲ್ಲ ಕೊಳ್ಳೇಗಾಲದ ಪಾಳ್ಯ ಗ್ರಾಮದವರು ಎನ್ನಲಾಗಿದೆ. ಒಂದೇ ಕುಟುಂಬದ ನಾಲ್ವರು ಬೈಕ್‌ನಲ್ಲಿ ಬರುವಾಗ ನಿಯಂತ್ರಣ ತಪ್ಪಿ ಎದುರು ಬಂದ ಲಾರಿಗೆ ಡಿಕ್ಕಿಯಾಗಿದೆ. ಬೈಕ್‌ನಿಂದ ಬಿದ್ದ ರಭಸಕ್ಕೆ ಸಂತೋಷ್, ಸೌಮ್ಯ ದಂಪತಿ ಹಾಗೂ ಮಗಳು ನಿತ್ಯಸಾಕ್ಷಿ ಮೂವರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಗ ಅಭಿ ಗಂಭೀರ ಗಾಯಗೊಂಡಿದ್ದ, ಇದೀಗ ಆತನೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.