ಚಿತ್ರದುರ್ಗ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಲು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಚಿತ್ರದುರ್ಗದಲ್ಲಿ ಬುಧವಾರ ಬೈಕ್ ರ್‍ಯಾಲಿ ನಡೆಯಿತು.
ಚಿತ್ರದುರ್ಗ ನಗರದ ಆವರಣದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಎಸ್. ಜೆ.ಸೋಮಶೇಖರ್ ಅವರು ಮತದಾನ ಜಾಗೃತಿಗೆ ಹಸಿರು ನಿಶಾನೆ ತೋರುವ ಮೂಲಕ ಬೈಕ್ ರ್‍ಯಾಲಿಗೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಎಸ್. ಜೆ.ಸೋಮಶೇಖರ್, ಇದೇ ಏಪ್ರಿಲ್ ೨೬ ರಂದು ನಡೆಯುವ ಪ್ರಜಾಪ್ರಭುತ್ವ ಉತ್ಸವದಲ್ಲಿ ಭಾಗವಹಿಸಿ ಮತದಾನದ ಹಕ್ಕು ಚಲಾಯಿಸಲು ಸುವರ್ಣಾವಕಾಶ. ಐದು ವರ್ಷಕ್ಕೊಮ್ಮೆ ಬರುವ ಈ ಸಂತೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿರುವ ಎಲ್ಲ ಅರ್ಹ ಮತದಾರರು ಕಡ್ಡಾಯವಾಗಿ ಮತಗಟ್ಟೆಗೆ ಬಂದು ಮತದಾನ ಮಾಡಬೇಕು. ನೀವು ಮತ್ತು ನಿಮ್ಮ ಸ್ನೇಹಿತರು, ಸಂಬಂಧಿಕರು ಮತ್ತು ಕುಟುಂಬದವರಿಗೆ ಮತದಾನ ಮಾಡಲು ತಿಳಿಸಲಾಗಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಶೇ. ೭೦ ಮತದಾನ ನಡೆದಿದ್ದು, ಈ ಬಾರಿ ಶೇ. ೫ರಷ್ಟು ಮತದಾನ ಪ್ರಮಾಣ ಹೆಚ್ಚಿಸಲು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂಬ ಉದ್ದೇಶದಿಂದ ಜಿಲ್ಲೆಯಾದ್ಯಂತ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ನಿರ್ಭೀತಿಯಿಂದ ಮತಗಟ್ಟೆಗೆ ಬಂದು ಕಡ್ಡಾಯವಾಗಿ ಮತದಾನ ಮಾಡಬೇಕು. ಯಾರೂ ಮತದಾನದಿಂದ ವಂಚಿತರಾಗಬಾರದು. ಮತದಾನ ಜಾಗೃತಿ ಬೈಕ್ ರ್ಯಾಲಿ ಜಿಲ್ಲಾ ಪಂಚಾಯಿತಿಯಿಂದ ಆರಂಭಗೊಂಡು ಮದಕರಿ ವೃತ್ತ, ಪ್ರವಾಸಿ ಮಂದಿರದ ಮೂಲಕ ಗಾಂಧಿ ವೃತ್ತ, ಸಂಗೊಳ್ಳಿರಾಯಣ್ಣ ವೃತ್ತದ ಮೂಲಕ ಕನಕ ವೃತ್ತದ ಮೂಲಕ ಜಿಲ್ಲಾ ಪಂಚಾಯಿತಿಯಲ್ಲಿ ಮುಕ್ತಾಯಗೊಂಡಿತು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೆ.ತಿಮ್ಮಪ್ಪ, ಚಿತ್ರದುರ್ಗ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪಿ.ಎಸ್.ಅಂತರಾಜು, ಜಿಲ್ಲಾ ಸ್ವೀಪ್ ಸಮಿತಿ ಸಂಯೋಜಕಿ ಸುಷ್ಮಾರಾಣಿ, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕಿ ಎಚ್.ಯರಿಸ್ವಾಮಿ, ರೂಪ್ ಕುಮಾರಿ, ಜಿಲ್ಲಾ ಪಂಚಾಯಿತಿ ಮುಖ್ಯಸ್ಥರು, ಸಿಬ್ಬಂದಿ ಹಾಗೂ ಚಿತ್ರದುರ್ಗ ತಾಲೂಕು ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು. ಉಪಸ್ಥಿತರಿದ್ದರು.