ಬೆಳಗಾವಿ (ಸುವರ್ಣ ವಿಧಾನಸೌಧ): ‘ಕಿರು ಹಣಕಾಸು (ಮೈಕ್ರೋ ಫೈನಾನ್ಸ್) ಸಂಸ್ಥೆಗಳು ಸಾಲ ನೀಡಿ, ಹೆಚ್ಚಿನ ಬಡ್ಡಿ, ಶುಲ್ಕ ಸಂಗ್ರಹಿಸುವುದನ್ನು ಹಾಗೂ ಸಾಲಗಾರರಿಗೆ ಕಿರುಕುಳ ನೀಡುವುದನ್ನು ತಡೆಯಲು ಪ್ರತ್ಯೇಕ ಮಸೂದೆ ರೂಪಿಸಲಾಗುವುದು’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಧಾನಸಭೆಯಲ್ಲಿ ಭರವಸೆ ನೀಡಿದರು.
ಅತಿ ಹೆಚ್ಚಿನ ಬಡ್ಡಿ ನೀಡುವ ಆಮಿಷವೊಡ್ಡಿ, ಠೇವಣಿ ಸಂಗ್ರಹಿಸಿ, ವಂಚಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಇದ್ದ ತೊಡಕುಗಳನ್ನು ನಿವಾರಿಸಲು ರೂಪಿಸಿರುವ ‘ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ (ತಿದ್ದುಪಡಿ) ಮಸೂದೆ–2024’ಕ್ಕೆ ವಿಧಾನಸಭೆ ಸೋಮವಾರ ಅಂಗೀಕಾರ ನೀಡಿತು.
ಮಸೂದೆ ಕುರಿತ ಚರ್ಚೆಯಲ್ಲಿ ಭಾಗವಹಿಸಿದ ಕಾಂಗ್ರೆಸ್‌ನ ಪಿ.ಎಂ. ನರೇಂದ್ರಸ್ವಾಮಿ, ‘ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಜನರನ್ನು ಶೋಷಣೆ ಮಾಡುತ್ತಿವೆ. ಅವುಗಳ ನಿಯಂತ್ರಣವೂ ಆಗಬೇಕು’ ಎಂದು ಆಗ್ರಹಿಸಿದರು. ‘ಶೇಕಡ 40ರಷ್ಟು ಬಡ್ಡಿ ಸಂಗ್ರಹಿಸುತ್ತಿದ್ದಾರೆ’ ಎಂದು ಕಾಂಗ್ರೆಸ್‌ನ ಕೆ.ಎಂ. ಶಿವಲಿಂಗೇಗೌಡ ದೂರಿದರು.
ಜಿಎಸ್‌ಟಿ ಮಸೂದೆಗೂ ಒಪ್ಪಿಗೆ: ರಾಜ್ಯ ಸರ್ಕಾರ ಮತ್ತು ತೆರಿಗಾರರ ಮಧ್ಯೆ ಇರುವ 80,000 ಪ್ರಕರಣಗಳನ್ನು ಒಂದು ಬಾರಿ ತೀರುವಳಿ ಯೋಜನೆಯಡಿ ಇತ್ಯರ್ಥಪಡಿಸಲು ಅವಕಾಶ ಕಲ್ಪಿಸುವ ‘ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ಎರಡನೇ ತಿದ್ದುಪಡಿ) ಮಸೂದೆ–2024’ಕ್ಕೆ ಸದನ ಒಪ್ಪಿಗೆ ನೀಡಿತು.