ವಾಷಿಂಗ್ಟನ್ : ಅಮೆರಿಕದ ಪ್ರಸಿದ್ಧ ಯೆಲ್ಲೋಸ್ಟೋನ್ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರವಾಸಿಗನೊಬ್ಬನ ಮೇಲೆ ಕಾಡುಕೋಣ (Bison) ಭೀಕರವಾಗಿ ದಾಳಿ ಮಾಡಿರುವ ಘಟನೆ ನಡೆದಿದೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಾಡುಕೋಣ ತನ್ನ ಬಲಿಷ್ಠ ಕೋಡುಗಳಿಂದ ಪ್ರವಾಸಿಗನನ್ನು ಗಾಳಿಯಲ್ಲಿ ಸುಮಾರು 8 ಅಡಿಗೂ ಹೆಚ್ಚು ಎತ್ತರಕ್ಕೆ ಎಸೆದಿರುವ ದೃಶ್ಯ ಕಂಡುಬಂದಿದೆ.
ನಡೆದಿದ್ದೇನು?
ವ್ಯೋಮಿಂಗ್‌ನಲ್ಲಿರುವ ಯೆಲ್ಲೋಸ್ಟೋನ್ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ್ದ ಪ್ರವಾಸಿಗನೊಬ್ಬ ವನ್ಯಜೀವಿ ವೀಕ್ಷಣೆಯ ವೇಳೆ ನಿಯಮ ಉಲ್ಲಂಘಿಸಿ ಕಾಡುಕೋಣದ ತೀರಾ ಹತ್ತಿರ ತೆರಳಿದ್ದಾನೆ ಎನ್ನಲಾಗಿದ್ದು, ಸಾಮಾನ್ಯವಾಗಿ ಬೈಸನ್‌ಗಳು ಶಾಂತ ಸ್ವಭಾವ ಹೊಂದಿದ್ದರೂ, ತಮ್ಮ ಸುರಕ್ಷತೆಗೆ ಅಪಾಯ ಎದುರಾಗಿದೆ ಎಂದು ಭಾವಿಸಿದಾಗ ಆಕ್ರಮಣಕಾರಿ ವರ್ತನೆ ತೋರಬಹುದು. ಪ್ರವಾಸಿಗ ಹತ್ತಿರ ಬಂದ ಹಿನ್ನೆಲೆಯಲ್ಲಿ ಕಾಡುಕೋಣ ಏಕಾಏಕಿ ಆತನತ್ತ ನುಗ್ಗಿದೆ.
ಪ್ರವಾಸಿಗ ತಪ್ಪಿಸಿಕೊಳ್ಳಲು ಓಡಲು ಪ್ರಯತ್ನಿಸಿದರೂ, ವೇಗವಾಗಿ ಬಂದ ಕಾಡುಕೋಣ ತನ್ನ ಕೋಡುಗಳಿಂದ ಆತನನ್ನು ಮೇಲಕ್ಕೆ ಎತ್ತಿ ಎಸೆದಿದ್ದು, ಘಟನೆಯ ತೀವ್ರತೆಗೆ ಆತ ಗಾಳಿಯಲ್ಲಿ ಸುಮಾರು 8 ಅಡಿ ಎತ್ತರಕ್ಕೆ ಹಾರಿ ನೆಲಕ್ಕೆ ಬಿದ್ದಿದ್ದಾನೆ. ಹತ್ತಿರದಲ್ಲಿದ್ದ ಇತರ ಪ್ರವಾಸಿಗರು ಈ ಭಯಾನಕ ದೃಶ್ಯವನ್ನು ತಮ್ಮ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದಾರೆ. ದಾಳಿಗೊಳಗಾದ ವ್ಯಕ್ತಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಉದ್ಯಾನವನದ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ಬಳಿಕ ವನ್ಯಜೀವಿ ಅಧಿಕಾರಿಗಳು ಪ್ರವಾಸಿಗರಿಗೆ ಎಚ್ಚರಿಕೆ ನೀಡಿದ್ದು, ರಾಷ್ಟ್ರೀಯ ಉದ್ಯಾನವನಗಳಲ್ಲಿ ಪ್ರಾಣಿಗಳಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿದ್ದಾರೆ. ವನ್ಯಜೀವಿಗಳಿಂದ ಕನಿಷ್ಠ 75 ಅಡಿ ಅಂತರ ಇರಿಸುವುದು ಅಗತ್ಯ ಎಂದು ತಿಳಿಸಿದ್ದಾರೆ.



