ಬೆಂಗಳೂರು: ಬಿಟ್ ಕಾಯಿನ್ ಹಗರಣದ ತನಿಖೆಯನ್ನು ಸಿಸಿಬಿ ಮತ್ತು ಸಿಐಡಿಗೆ ವಹಿಸಿದರೆ ಕಳ್ಳರ ಕೈಗೆ ಬೀಗದ ಕೈ ಕೊಟ್ಟಂತೆ ಎಂದು ಮಾಹಿತಿ ತಂತ್ರಜ್ಞಾನ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಸರ್ಕಾರದ ಮಟ್ಟದಲ್ಲಿ ಯಾವ ರೂಪದ ತನಿಖೆ ನಡೆಸಬೇಕು ಎಂಬ ಚರ್ಚೆಗಳು ನಡೆಯುತ್ತಿವೆ. ಹಗರಣಗಳ ಸ್ವರೂಪ ಬೇರೆಯಿದ್ದು, ಕೆಲವಕ್ಕೆ ಪೊಲೀಸರ ತನಿಖೆ ಸಾಕಾಗಬಹುದು, ಇನ್ನೂ ಕೆಲವು ಹಗರಣಗಳಿಗೆ ಸರ್ಕಾರದ ಅಪರ ಮುಖ್ಯಕಾರ್ಯದರ್ಶಿಗಳು ಅಥವಾ ವಿಶೇಷ ತನಿಖಾ ದಳದಂತಹ ಸಮಿತಿಗಳ ಅಗತ್ಯವಿದೆ.
ಬಿಟ್ ಕಾಯಿನ್ ಹಗರಣದ ತನಿಖೆಗೆ ಮಾಹಿತಿ ತಂತ್ರಜ್ಞಾನ ಪರಿಣಿತರ ಅಗತ್ಯ ಇದೆ. ತನಿಖೆ ಯಾವ ಸ್ವರೂಪದಲ್ಲಿರಬೇಕೆಂಬುದನ್ನು ಮುಖ್ಯಮಂತ್ರಿ ಮತ್ತು ಗೃಹಸಚಿವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು.
ಸ್ಟೀಲ್ ಬ್ರಿಡ್ಜ್ ನಿರ್ಮಾಣದಿಂದ ಹಿಂದಿನ ಸಿದ್ದರಾಮಯ್ಯ ಸರ್ಕಾರ ವಾಪಸ್ ಬಂದ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಬಾರದು. ಸಿದ್ದರಾಮಯ್ಯ ಸರ್ಕಾರ ಜನಾಭಿಪ್ರಾಯಕ್ಕೆ ಮನ್ನಣೆ ನೀಡುತ್ತದೆ, ಸೂಕ್ಷ್ಮಮತಿಯಾಗಿ ವರ್ತಿಸುತ್ತದೆ ಎಂಬ ನಿಟ್ಟಿನಲ್ಲಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.