ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ವಿಧಾನಸಭಾ ಚುನಾವಣಾ ಫಲಿತಾಂಶಸ್ಪಷ್ಟವಾಗಿದ್ದು, ಬರೋಬ್ಬರಿ 27ವರ್ಷಗಳ ನಂತರ ಬಿಜೆಪಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವುದು ಫಿಕ್ಸ್ ಆಗಿದೆ. ಮತ ಎಣಿಕೆ ಪ್ರಕ್ರಿಯೆ ಕೊನೆಯ ಹಂತಕ್ಕೆ ಬಂದು ತಲುಪಿದ್ದು, ಸ್ಪಷ್ಟ ಬಹುಮತದ ಮೂಲಕ ಬಿಜೆಪಿ ಪ್ರಚಂಡ ಗೆಲುವು ಸಾಧಿಸಿದೆ. ಇತ್ತ ನೆಲಕಚ್ಚಿರುವ ಆಪ್‌ನ ಘಟಾನುಘಟಿ ನಾಯಕರೇ ಸೋಲುನ್ನುವ ಮೂಲಕ ತೀವ್ರ ಮುಖಭಂಗ ಎದುರಿಸುವಂತಾಗಿದೆ. ನವದೆಹಲಿ ಕ್ಷೇತ್ರದಲ್ಲಿ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ಸೋತಿದ್ದು, ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕೇಜ್ರಿವಾಲ್ ವಿರುದ್ಧ 3000ಕ್ಕೂ ಅಧಿಕ ಮತಗಳಿಂದ ಪರ್ವೇಶ್ ಜಯಭೇರಿ ಬಾರಿಸಿದ್ದಾರೆ.
ಮತ್ತೊಂದೆಡೆ ಜಂಗ್‌ಪುರದಲ್ಲಿ ಮಾಜಿ ಡಿಸಿಎಂ ಮನೀಷ್ ಸಿಸೋಡಿಯಾ ಕೂಡ ಬಿಜೆಪಿ ಅಭ್ಯರ್ಥಿ ತಾರ್ವಿಂದರ್ ಸಿಂಗ್ ಅವರ ವಿರುದ್ಧ ಹೀನಾಯ ಸೋಲುಂಡಿದ್ದಾರೆ. ಮತ್ತೊಂದೆಡೆ ಕಲ್ಕಾಜಿ ಕ್ಷೇತ್ರದಲ್ಲಿ ಸಿಎಂ ಆತಿಶಿ ಕೊನೆಯ ಹಂತದಲ್ಲಿ ಗೆಲುವು ಸಾಧಿಸಿದ್ದಾರೆ.
ಭಾರತೀಯ ಚುನಾವಣಾ ಆಯೋಗದ ಮಧ್ಯಾಹ್ನ 12:20 ಕ್ಕೆ ಬಿಡುಗಡೆಯಾದ ಮಾಹಿತಿಯ ಪ್ರಕಾರ, ಭಾರತೀಯ ಜನತಾ ಪಕ್ಷದ ಹೆಚ್ಚಿನ ಪ್ರಮುಖರು ದೆಹಲಿಯಲ್ಲಿ ದೊಡ್ಡ ಗೆಲುವಿನ ಹಾದಿಯಲ್ಲಿದ್ದಾರೆ. 70 ಕ್ಷೇತ್ರಗಳ ಮತ ಎಣಿಕೆ ಪ್ರಕ್ರಿಯೆ ಕೊನೆಗೆ ಹಂತಕ್ಕೆ ಬಂದು ತಲುಪಿದೆ. ಬಿಜೆಪಿ ಈಗಾಗಲೇ ಮ್ಯಾಜಿಕ್ ಸಂಖ್ಯೆ 36 ಅನ್ನು ದಾಟಿ 45 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಆ ಮೂಲಕ ಸಮೀಕ್ಷೆಗಳು ನಿಜವಾಗಿದೆ.