ಮೈಸೂರು: ಕೇಂದ್ರ ಗೃಹ ಸಚಿವ, ಬಿಜೆಪಿಯ ಚಾಣಕ್ಯ ಎಂದೇ ಹೆಸರಾಗಿರುವ ಅಮಿತ್ ಶಾ ಅವರು ಭಾನುವಾರ ನಸುಕಿನ ಜಾವವೇ ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿದ್ದಾರೆ. ನಸುಕಿನ ಜಾವ 3 ಗಂಟೆಗೆ ಹೊತ್ತಿಗೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ಆಗಮಿಸಿದ ಅಮಿತ್ ಶಾ, ಇಲ್ಲಿಂದ ರಸ್ತೆ ಮಾರ್ಗದ ಮೂಲಕ ರ್ಯಾಡಿಸನ್ ಬ್ಲೂ(Radisson Blue) ಹೋಟೆಲ್ ಗೆ ತೆರಳಿ ಅಲ್ಲಿ ವಾಸ್ತವ್ಯ ಹೂಡಿದರು. ಸದ್ಯ ಹೊಟೇಲ್ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಸಿಎಂ ತವರು ಜಿಲ್ಲೆಯಿಂದಲೇ ಚುನಾವಣಾ ರಣಕಹಳೆ?:
ಲೋಕಸಭೆ ಚುನಾವಣೆ ಹೊತ್ತಿನಲ್ಲಿ ರಾಜ್ಯಕ್ಕೆ ಆಗಮಿಸಿರುವ ಅಮಿತ್ ಶಾ ಅವರು ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಿಂದಲೇ ಚುನಾವಣಾ ರಣಕಹಳೆ ಮೊಳಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಬೆಳಗ್ಗೆಯೇ ಬಿಜೆಪಿ ಮುಖಂಡರ ಜೊತೆ ಸಭೆ ನಡೆಸಿ ಮಧ್ಯಾಹ್ನ ಚಾಮುಂಡಿಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಮಂಡಕಹಳ್ಳಿ ಏರ್ಪೋರ್ಟ್ಗೆ ತೆರಳಲಿದ್ದಾರೆ. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ನಂಜನಗೂಡು ತಾಲೂಕಿನ ಸುತ್ತೂರು ಗ್ರಾಮಕ್ಕೆ ತೆರಳಲಿದ್ದಾರೆ. ಅಲ್ಲಿ ನಡೆಯುತ್ತಿರುವ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಲಿದ್ದಾರೆ.
ಮಧ್ಯಾಹ್ನ 2.30ಕ್ಕೆ ಮತ್ತೆ ರ್ಯಾಡಿಸನ್ ಬ್ಲೂ (Radisson Blu)ಹೋಟೆಲ್ಗೆ ಆಗಮಿಸಿ ಬಳಿಕ ಮಧ್ಯಾಹ್ನ 2.40ಕ್ಕೆ ಬಿಜೆಪಿ ಪ್ರಮುಖರ ಜತೆ ಸಭೆ ನಡೆಯಲಿದ್ದು, ಲೋಕಸಭೆ ಚುನಾವಣಾ ರಣತಂತ್ರ ಕುರಿತು ಸುಮಾರು 2 ಗಂಟೆಗಳ ಕಾಲ ಚರ್ಚೆ ನಡೆಸಲಿದ್ದಾರೆ.
ಇಂದೇ ಲೋಕಸಭೆ ಚುನಾವಣೆ ಅಭ್ಯರ್ಥಿ ಫೈನಲ್?:
ಅಮಿತ್ ಶಾ ಆಗಮನ ಲೋಕಸಭೆ ಚುನಾವಣೆ ಮುನ್ನ ಬಿಜೆಪಿ ಹಾಗೂ ಆಡಳಿತ ಪಕ್ಷ ಕಾಂಗ್ರೆಸ್ ವಲಯದಲ್ಲಿ ಸಂಚಲನ ಮೂಡಿಸಿದೆ. ಈಗಾಗಲೇ ಸಿದ್ದರಾಮಯ್ಯನವರು ಅಮಿತ್ ಶಾ ಅವರ ಭೇಟಿಯನ್ನು ಟೀಕಿಸಿದ್ದಾರೆ. ಲೋಕಸಭೆ ಚುನಾವಣೆಗೆ ಹೆಣೆಯಬೇಕಾಗಿರುವ ಮಹತ್ವದ ಕಾರ್ಯತಂತ್ರ ಕುರಿತು ಅಮಿತ್ ಶಾ ಚರ್ಚಿಸಲಿದ್ದಾರೆ.
ಮಹತ್ವ ಪಡೆದುಕೊಂಡ ಸಭೆ:
ರಾಜ್ಯ ಬಿಜೆಪಿ ನಾಯಕರ ಜೊತೆ ಅಮಿತ್ ಶಾ ನಡೆಸುವ ಇಂದಿನ ಸಭೆ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿ ಮಹತ್ವ ಪಡೆದುಕೊಂಡಿದೆ. ಪೂರ್ವನಿಯೋಜಿತ ಕಾರ್ಯಕ್ರಮ ಹಿನ್ನೆಲೆ ಬಿಎಸ್ ಯಡಿಯೂರಪ್ಪ ಅವರನ್ನು ಹೊರತುಪಡಿಸಿ ಈ ಸಭೆಯಲ್ಲಿ ರಾಜ್ಯದ ಪ್ರಮುಖರು ಭಾಗಿಯಾಗಲಿದ್ದಾರೆ. ಸಭೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ವಿಚಾರವಾಗಿಯೂ ಚರ್ಚೆ ನಡೆಯುವ ಸಾಧ್ಯತೆ ಇದೆ.