ಶಿವಮೊಗ್ಗ: ಹೆಚ್.ಡಿ.ರೇವಣ್ಣ ಬಂಧನದ ಹಿಂದೆ ಬಿಜೆಪಿ ಷಡ್ಯಂತ್ರವಿದೆ ಎಂದು ಮಂಡ್ಯ ಶಾಸಕ ರವಿ ಗಣಿಗ ಆರೋಪಿಸಿದ್ದಾರೆ.
ಇಂದು ಭಾನುವಾರ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಜನಾರ್ಧನ ರೆಡ್ಡಿಯನ್ನು ನಿಯಂತ್ರಿಸಿ ಹುನ್ನಾರ ಮಾಡಿದ ಬಿಜೆಪಿ, ಈಗ ಹೆಚ್.ಡಿ.ಕುಮಾರಸ್ವಾಮಿಯವರನ್ನು ಕಂಟ್ರೋಲ್ ಮಾಡಲು ಜೊತೆಯಲ್ಲಿಯೇ ಇದ್ದು ಷಂಡ್ಯಂತ್ರ ಮಾಡಿದ್ದಾರೆ ಎಂದಿದ್ದಾರೆ. ಸಣ್ಣಪುಟ್ಟ ಪಕ್ಷ ಮುಗಿಸಲು ಬಿಜೆಪಿ ಹೊರಟಿದೆ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಕಾರ್ಯಕರ್ತರೇ ಇಲ್ಲ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಆ ಪಕ್ಷದ ಕಾರ್ಯಕರ್ತರನ್ನು ತನ್ನತ್ತ ಸೆಳೆಯಲು ಬಿಜೆಪಿ ಹೆಣೆದ ತಂತ್ರಗಾರಿಕೆಯೇ ಜೆಡಿಎಸ್ ಜೊತೆಗಿನ ಮೈತ್ರಿ. ಈಗ ರೇವಣ್ಣ ಬಂಧನದ ಹಿಂದೆಯೂ ಬಿಜೆಪಿ ಷಡ್ಯಂತ್ರವಿದ್ದು, ಒಂದೇ ಕಲ್ಲಿನಲ್ಲಿ ಎರಡು ಪಕ್ಷಿ ಹೊಡೆಯುವ ತಂತ್ರ ಬಿಜೆಪಿಯದ್ದು ಎಂದು ಕಾಂಗ್ರೆಸ್ ಶಾಸಕ ಹೇಳಿದ್ದಾರೆ.