ಬೆಂಗಳೂರು : ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುತ್ತಿಗೆದಾರರ ಸಂಘ ಮಾಡಿದ್ದ ಕಮಿಷನ್ ಆರೋಪ ಹಾಗೂ ಅವ್ಯವಹಾರವನ್ನು ಸಾಬೀತು ಪಡಿಸುವ ಸಂದಿಗ್ಧತೆಗೆ ಸಿಲುಕಿರುವ ಕಾಂಗ್ರೆಸ್ ಸರ್ಕಾರ, ತನಿಖಾ ಸಂಸ್ಥೆ ನಿಗದಿಪಡಿಸುವ ಮೂಲಕ ಪ್ರಕರಣವನ್ನು ತಾರ್ಕಿಕ ಹಂತಕ್ಕೆ ಕೊಂಡೊಯ್ಯಲು ನಿರ್ಧರಿಸಿದೆ. ಹಾಗಾಗಿ ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಗುತ್ತಿಗೆದಾರರ ಸಂಘದ ಆರೋಪ ಪರಿಗಣಿಸಿ ಸರ್ಕಾರ ಎರಡು ತನಿಖಾ ಆಯೋಗ ರಚಿಸಿತ್ತು. ಈ ಪೈಕಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ತನಿಖೆ ನಡೆಸಿ ವರದಿ ನೀಡಲು ನ್ಯಾ.ನಾಗಮೋಹನ್ ದಾಸ್ ಅವರಿಗೆ ಜವಾಬ್ದಾರಿ ನೀಡಲಾಗಿತ್ತು. ನ್ಯಾ.ನಾಗಮೋಹನ್ ದಾಸ್ ಕಳೆದ ವಾರ ವರದಿಯನ್ನು ಸಿಎಂಗೆ ಸಲ್ಲಿಸಿದ್ದರು. ಮುಂದುವರಿದ ಪ್ರಕ್ರಿಯೆಯ ಭಾಗವಾಗಿ ನಿವೃತ್ತ ಇಂಜಿನಿಯರ್‌ಗಳ ತಂಡ ಎಡಬಿಡದೆ ಈ ವರದಿ ವಿಶ್ಲೇಷಿಸಿದ್ದು, ಯಾವೆಲ್ಲ ಪ್ರಕರಣ ತನಿಖೆಗೆ ಸೂಕ್ತವಾಗಿದೆ ಎಂಬುದನ್ನು ಪಟ್ಟಿ ಮಾಡಿ ವರದಿ ಸಿದ್ಧಮಾಡಿದೆ.
ಇದೇ ವೇಳೆ ಇಂದು ನಡೆಯುವ ಸಂಪುಟ ಸಭೆಯಲ್ಲಿ ವರದಿ ಕುರಿತು ಚರ್ಚೆ ನಡೆಯಲಿದ್ದು, ಮುಂದಿನ ತನಿಖೆಗಾಗಿ ಯಾವ ತನಿಖಾ ಸಂಸ್ಥೆಗೆ ವಹಿಸುವುದೆಂಬುದನ್ನು ತೀರ್ಮಾನಿಸಲಾಗುತ್ತದೆ. ಲೋಕಾಯುಕ್ತ, SIT ಅಥವಾ ಬಿಎಂಟಿಎಫ್ ಪೈಕಿ ಒಂದು ಸಂಸ್ಥೆಯನ್ನು ನಿಗದಿ ಪಡಿಸಲಾಗುತ್ತದೆ. ತಕ್ಷಣವೇ ವಾರದಲ್ಲಿ ಎಫ್‌ಐಆರ್ ಗಳು ದಾಖಲಾಗಲಿದೆ. ಲಭ್ಯ ಮಾಹಿತಿ ಪ್ರಕಾರ ಹಿರಿಯ ಅಧಿಕಾರಿಗಳನ್ನು ತಕ್ಷಣವೇ ಅಮಾನತುಗೊಳಿಸುವ ನಿಟ್ಟಿನಲ್ಲೂ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.