Wednesday, December 3, 2025
Google search engine

Homeರಾಜಕೀಯಬಿಜೆಪಿ ದೇಶ ಕಟ್ಟುವ ಬದಲು ಧರ್ಮ ಕಟ್ಟುತ್ತಿದ್ದಾರೆ: ಕಿಮ್ಮಾನೆ ರತ್ನಾಕರ್

ಬಿಜೆಪಿ ದೇಶ ಕಟ್ಟುವ ಬದಲು ಧರ್ಮ ಕಟ್ಟುತ್ತಿದ್ದಾರೆ: ಕಿಮ್ಮಾನೆ ರತ್ನಾಕರ್

ಉಡುಪಿ : ಬಿಜೆಪಿಯವರು ದೇಶ ಕಟ್ಟುವ ಬದಲು ಧರ್ಮ ಕಟ್ಟುತ್ತಿದ್ದಾರೆ. ಇದರಿಂದ ದೇಶಕ್ಕೆ ಉಪಯೋಗವಿಲ್ಲ, ಅಲ್ಲದೇ ಗಾಂಧಿ, ನೆಹರು ಅವರನ್ನು ಬಿಜೆಪಿಯು ವಿರೂಪಗೊಳಿಸುತ್ತಿದೆ. ಹಾಗಾಗಿ ಕಾಂಗ್ರೆಸ್ ಪಕ್ಷವು ಗಾಂಧಿ ಚಿಂತನೆಗಳನ್ನು ಜನಸಾಮಾನ್ಯರಿಗೆ ತಿಳಿಸುವ ಪ್ರಯತ್ನ ಮಾಡಬೇಕು ಎಂದು ಕಾಂಗ್ರೆಸ್ ಪ್ರಚಾರ ಸಮಿತಿಯ ರಾಜ್ಯ ಉಪಾಧ್ಯಕ್ಷ ಕಿಮ್ಮನೆ ರತ್ನಾಕರ್ ಕರೆ ನೀಡಿದ್ದಾರೆ.

ಮಂಗಳ‍ವಾರ ನಗರದ ಪುರಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಆಶ್ರಯದಲ್ಲಿ ನಡೆದ ‘ಜೈ ಬಾಪು – ಜೈ ಭೀಮ್- ಜೈ ಸಂವಿಧಾನ ಸಮಾವೇಶ’ವನ್ನು ಸಂವಿಧಾನದ ಪೀಠಿಕೆಯನ್ನು ಓದುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಮುಂದುವರೆಸುತ್ತಾ ಗಾಂಧಿ ವಿಚಾರ ಧಾರೆಗಳು, ಜೀವನ ಚರಿತ್ರೆ, ಸೈದ್ಧಾಂತಿಕ ನಿಲುವುಗಳನ್ನು ಕಾರ್ಯಕರ್ತರಿಗೆ ತಲುಪಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಬೇಕಾಗಿದೆ ಎಂದು ಹೇಳಿದರು.

ಈ ವೇಳೆ ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷರು ಹಾಗೂ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಮಹಾತ್ಮಾ ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ 100ರ ಸಂಭ್ರಮದ ಸವಿನೆನಪಿಗಾಗಿ ಈ ಕಾರ್ಯಕ್ರಮ ರಾಜ್ಯದ ವಿವಿಧೆಡೆ ಆಯೋಜಿಸಲಾಗಿದೆ. ಅಲ್ಲದೆ ಪಕ್ಷವನ್ನು ಸಿದ್ಧಾಂತದ ಮೇಲೆ ಕಟ್ಟುವ ನಿಟ್ಟಿನಲ್ಲಿ ಆಯ್ದ ಕಾರ್ಯಕರ್ತರಿಗೆ ತರಬೇತಿ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದ ಜನಪರ ಕಾರ್ಯಗಳಿಂದಾಗಿ ಕರ್ನಾಟಕದ ಜನ ಆರ್ಥಿಕವಾಗಿ ಸದೃಢರಾಗಿದ್ದಾರೆ. ಹಾಗಾಗಿ ತಲಾ ಆದಾಯದಲ್ಲಿ ಕರ್ನಾಟಕ ದೇಶಕ್ಕೇ ನಂಬರ್ ಒನ್ ಆಗಿದೆ, ಆದರೇ ಪ್ರಧಾನಿ ನರೇಂದ್ರ ಮೋದಿ ಅವರು ಗ್ಯಾರಂಟಿ ಯೋಜನೆಗಳನ್ನು ಅಣಕಿಸಿದ್ದು, ದೇಶ ದಿವಾಳಿಯಾಗುತ್ತದೆ ಎಂದಿದ್ದರು. ಆ ಕುರಿತು ಈಗ ಬಿಹಾರದಲ್ಲಿ 10 ಸಾವಿರ ರೂ. ಕೊಡುವಾಗ ಅವರ ಸರ್ಕಾರ ದಿವಾಳಿಯಾಗುವುದಿಲ್ಲವೇ ಎಂದು ಪ್ರಶ್ನಿಸಿದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಪ್ರಚಾರ ಸಮಿತಿಯ ಉಪಾಧ್ಯಕ್ಷ ಮುನೀರ್ ಜನ್ಸಾಲೆ, ಚಲನಚಿತ್ರ ನಿರ್ದೇಶಕ ಎಸ್ . ನಾರಾಯಣ್, ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ್ ಪೂಜಾರಿ ಮುದ್ರಾಡಿ, ನಾಯಕ ಮುನಿಯಾಲು ಉದಯ ಕುಮಾರ್ ಶೆಟ್ಟಿ, ದಿನೇಶ್ ಹೆಗ್ಡೆ ಮೊಳಹಳ್ಳಿ, ಕೆಪಿಸಿಸಿ ವಕ್ತಾರೆ ವೆರೋನಿಕಾ ಕರ್ನೇಲಿಯೋ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್ , ಜಿಲ್ಲಾ ಕಾಂಗ್ರೆಸ್ ಸಮಿತಿಯ ವಿವಿಧ ಘಟಕಗಳ ಅಧ್ಯಕ್ಷರು, 7 ತಾಲೂಕು ಗ್ಯಾರಂಟಿ ಸಮಿತಿಗಳ ಅಧ್ಯಕ್ಷರು, ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರಚಾರ ಸಮಿತಿಯ ಮತ್ತು ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರುಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular