ಮೈಸೂರು : ಬಿಜೆಪಿ ತಾಳಕ್ಕೆ ಈಡಿ ಕುಣಿಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ತಪ್ಪು ಮಾಡಿಲ್ಲ. ಅವರ ಹೆಸರು ಕೆಡಿಸಲು, ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಈ ರೀತಿ ಮಾಡುತ್ತಿದ್ದಾರೆ.. ಆದರೆ ಇದರಲ್ಲಿ ಯಾವುದೇ ನಿಜಾಂಶ ಇಲ್ಲ. ಆರೋಪ ಮುಕ್ತರಾಗಿ ಸಿದ್ದರಾಮಯ್ಯ ಹೊರಬರುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಈಡಿ ಅವರು ಬೇಕು ಅಂತಲೇ ದುರದ್ದೇಶದಿಂದ ಮಾಡುತ್ತಿದ್ದಾರೆ. ಈಡಿ ಗೂ ಗೊತ್ತಿದೆ ೧೪ ನಿವೇಶನಗಳಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆ ನಡೆದಿಲ್ಲ ಎಂದು. ನಮಗೆ ಕೊಟ್ಟಿರುವ ನಿವೇಶನ ಕಾನೂನಾತ್ಮಕವಾಗಿಯೇ ಇದೆ. ಕೇಂದ್ರದವರು ಈಡಿ ಮೇಲೆ ಒತ್ತಡ ಹೇರುತ್ತಿದ್ದಾರೆ. ಕರ್ನಾಟಕದ ಬಿಜೆಪಿ ನಾಯಕರು ಹಾಗೂ ವಿರೋಧ ಪಕ್ಷದ ನಾಯಕರು ಈಡಿ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದರು.
ಈಡಿ ಗೆ ಯಾವ ಯಾವ ಸಾಕ್ಷಿಗಳು ಸಿಕ್ಕಿಲ್ಲ. ಬೇರೆಯವರ ಆಸ್ತಿಗಳನ್ನ ಸೀಜ್ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಹಾಗೂ ನಮ್ಮ ಕುಟುಂಬದ ಹೆಸರಿನಲ್ಲಿರುವ ಯಾವ ಆಸ್ತಿಗಳನ್ನು ಸೀಜ್ ಮಾಡಿಲ್ಲ. ಮುಡಾದ ಹಗರಣದಲ್ಲಿ ಭಾಗಿಯಾದವರ ಆಸ್ತಿಗಳನ್ನ ಮಾತ್ರ ಇಡಿ ಸೀಜ್ ಮಾಡುತ್ತಿದೆ ಎಂದರು.
ಮುಡಾದಿಂದ ಪಡೆದ ನಮ್ಮ ನಿವೇಶನದ ವಿಚಾರವೇ ಬೇರೆ. ಮುಡಾದಲ್ಲಿ ಆಗಿರುವ ಹಗರಣವೇ ಬೇರೆ. ಮುಡಾದವರು ನಮ್ಮ ಜಮೀನನ್ನ ಅನಧಿಕೃತವಾಗಿ ವಶಪಡಿಸಿಕೊಂಡಿದ್ದರು. ಇದಕ್ಕೆ ಬದಲಿಯಾಗಿ ನಿವೇಶನ ಕೊಟ್ಟಿದ್ದಾರೆ. ಹಿಂದೆ ಭೂಸ್ವಾಧಿನಪಡಿಸಿಕೊಂಡ ಭೂಮಿಗೆ ರೈತರಿಗೆ ೫೦:೫೦ ಅನುಪಾತದಲ್ಲಿ ನಿವೇಶನ ಕೊಟ್ಟು ಹಗರಣ ಮಾಡಿದ್ದಾರೆ. ಇದಕ್ಕೂ ನಮ್ಮ ೧೪ ನಿವೇಶಗಳಿಗೂ ಸಂಬಂಧ ಇಲ್ಲ ಎಂದುಹೇಳಿದರು.
ಕೆಪಿಸಿಸಿ ಅಧ್ಯಕ್ಣರ ಬದಲಾವಣೆ ದೊಡ್ಡ ನಾಯಕರಿಗೆ ಬಿಟ್ಟಿದ್ದು, ಸಿದ್ದರಾಮಯ್ಯ ತಮ್ಮ ಅಧಿಕಾರವನ್ನು ಪೂರ್ಣಗೊಳಿಸುತ್ತಾರೆ. ಅವರ ಅಧಿಕಾರಕ್ಕೆ ಯಾವ ಕುತ್ತು ಬಂದಿಲ್ಲ. ಹೈಕಮಾಂಡ್ ಸಿದ್ದರಾಮಯ್ಯ ಪರವಾಗಿದೆ. ಯಾರು ಕೂಡ ರಾಜೀನಾಮೆ ಕೊಡಿ ಎಂದು ಕೇಳಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ತಂದೆ ಪರವಾಗಿ ನಿಂತಿದ್ದು, ನಮ್ಮ ರಾಜ್ಯದ ಎಲ್ಲಾ ಜಿಲ್ಲೆಯ ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯಬೇಕು ಎಂದು ಹೇಳಿದ್ದಾರೆ ಎಂದರು.
ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಬಿಜೆಪಿಯವರು ಸುಖಾಸುಮ್ಮನೆ ಮಾತನಾಡುತ್ತಿದ್ದಾರೆ ಅಷ್ಟೆ ಎಂದರು.
ನಂಬಿಕೆ ಇದ್ದವರಿಂದ ಸ್ನಾನ
ದೇವರಲ್ಲಿ ನನಗೆ ನಂಬಿಕೆ ಇದೆ, ತಂದೆ ಸಿದ್ದರಾಮಯ್ಯ ಅವರಿಗೆ ನಂಬಿಕೆ ಇಲ್ಲ. ಕುಂಭಮೇಳದಲ್ಲಿ ಯಾರಿಗೆ ನಂಬಿಕೆ ಇರುತ್ತೆ ಅವರು ಹೋಗಿ ಸ್ನಾನ ಮಾಡುತ್ತಾರೆ. ನಂಬಿಕೆ ಇಲ್ಲದವರು ಸ್ನಾನ ಮಾಡಲ್ಲ. ಒಂದೇ ರೀತಿಯ ನಂಬಿಕೆ ಎಲ್ಲರಿಗೂ ಇರಬೇಕು ಎಂದು ಹೇಳಲು ಸಾಧ್ಯವಿಲ್ಲ.
ಡಾ.ಯತೀಂದ್ರ, ಎಂಎಲ್‌ಸಿ