ಬೆಂಗಳೂರು: ಇದೀಗ ಬರುತ್ತಿರುವ ಚುನಾವಣಾ ಫಲಿತಾಂಶ ಬಿಜೆಪಿಗೆ ಸಂತಸ ತಂದಿದೆ. ಮಧ್ಯಪ್ರದೇಶ, ರಾಜಸ್ಥಾನಗಳಲ್ಲಿ ಬಿಜೆಪಿ ಸ್ವೀಪ್ ಆಗಲಿದೆ. ತೆಲಂಗಾಣದಲ್ಲೂ ಬಿಜೆಪಿಗೆ ಮುನ್ನಡೆ ಸಾಧಿಸುತ್ತಿದೆ. ಎಲ್ಲ ಕಡೆಗಳಲ್ಲೂ ಬಿಜೆಪಿ ತನ್ನ ಸ್ಥಾನ ಹೆಚ್ಚಿಸಿಕೊಂಡಿದೆ. ಪ್ರಧಾನಿ ಮೋದಿ ಅವರ ಪ್ರಭಾವ ಎಲ್ಲ ಕಡೆಗಳಲ್ಲಿಯೂ ಕಾಣಿಸುತ್ತಿದೆ. ಛತ್ತೀಸ್ ಗಢದಲ್ಲೂ ಬಿಜೆಪಿ ಗೆಲ್ಲುವ ಪ್ರಯತ್ನ ಮಾಡುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ತಿಳಿಸಿದ್ದಾರೆ.
ಜಾಲಹಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ಇಂದು ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಈ ನಾಲ್ಕು ರಾಜ್ಯಗಳಲ್ಲೂ ಬಿಜೆಪಿಗೆ ಸೋಲಾಗಿತ್ತು. ಇದೀಗ ಎರಡು ಕಡೆ ಬಿಜೆಪಿಗೆ ಗೆಲುವು ಸಿಗಲಿರುವುದು ಬಹುತೇಕ ಪಕ್ಕಾ. ತೆಲಂಗಾಣದಲ್ಲಿ ಪೈಪೋಟಿ ನಡೆಸುತ್ತಿರುವುದು ಬಿಜೆಪಿಯ ದೊಡ್ಡ ಸಾಧನೆ. ಛತ್ತೀಸ್ ಗಢದಲ್ಲಿ ನಮ್ಮ ಪಕ್ಷ ಮುನ್ನಡೆಯಲ್ಲಿದೆ. ಮೋದಿ ನಾಯಕತ್ವಕ್ಕೆ ಬೆಂಬಲ ಸಿಕ್ಕಿದೆ ಎಂದು ತಿಳಿಸಿದರು.