ಮಂಗಳೂರು (ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿಯವರಿಗೆ ಸಾಮಾನ್ಯ ಜ್ಞಾನವಿದ್ದಲ್ಲಿ ನಾಯಕರನ್ನು ಕರೆಸಿ ಪ್ರಚೋದನೆ ನೀಡುವುದನ್ನು ಬಿಟ್ಟು ಶಾಂತಿ ನೆಲೆಸುವ ಸಂದೇಶ ಸಮಾಜಕ್ಕೆ ನೀಡುವಂತೆ ವಿನಂತಿಸಬೇಕಿತ್ತು. ಆದರೆ ಬಿಜೆಪಿ ನಾಯಕರು ಇಲ್ಲಿ ಬಂದು ಪೊಲೀಸರ ಆತ್ಮಸ್ಥೈರ್ಯ ಕೆಡಿಸುವ, ಅವರ ಕಾರ್ಯದಲ್ಲಿ ಹಸ್ತಕ್ಷೇಪ ಮಾಡುವ ಕಾರ್ಯ ಮಾಡಿದ್ದಾರೆ ಎಂದು ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್.ಪೂಜಾರಿ ಆರೋಪಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಡೆದ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಭೇಟಿ ನೀಡಿ ಇಲ್ಲಿನ ಸಾಮಾಜಿಕ, ಧಾರ್ಮಿಕ, ಸಂಘ ಸಂಸ್ಥೆಗಳ ಪ್ರಮುಖರನ್ನು, ಅಧಿಕಾರಿಗಳನ್ನು ಭೇಟಿ ಮಾಡಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ಶಾಂತಿ ನೆಲೆಸುವ ನಿಟ್ಟಿನಲ್ಲಿ ಪೂರ್ಣವಾದ ಸ್ವಾತಂತ್ರ್ಯ ಇರುವುದನ್ನು ಖಾತರಿಪಡಿಸಿದ್ದಾರೆ. ಇದು ಬಿಜೆಪಿ ಮತ್ತು ಕಾಂಗ್ರೆಸ್ಗೆ ಇರುವ ವ್ಯತ್ಯಾಸ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದರು.