ಮೈಸೂರು : ರಾಜ್ಯ ಆರ್ಥಿಕವಾಗಿ ದಿವಾಳಿಯಾಗಲು ಬಿಜೆಪಿ ಕಾರಣ. ಸಾಲಮಾಡಿ ಆರ್ಥಿಕವಾಗಿ ರಾಜ್ಯವನ್ನು ದಿವಾಳಿ ಮಾಡಿ ಹೋಗಿದ್ದಾರೆ. ಟೆಂಡರ್ ಕರೆದು 30 ಸಾವಿರ ಕೋಟಿ ರೂ. ಪೆಂಡಿಂಗ್ ಬಿಲ್ ಇದೆ. ಬಿಜೆಪಿ ಅವಧಿಯ ಅರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕೋಟ್ಯಂತರ ರೂ. ಖರ್ಚು ಮಾಡಿ ಆಪರೇಷನ್ ಕಮಲ ಮಾಡಿದವರು, ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗೆ ಇಲ್ಲ ಎಂದು ವಾಗ್ದಾಳಿ ಮಾಡಿದರು.
ರಾಜ್ಯದಲ್ಲಿ ವಿದ್ಯುತ್ ಅಭಾವ ಉಂಟಾಗಲು ಬಿಜೆಪಿಯೇ ಕಾರಣ. ಬಿಜೆಪಿ ಅವಧಿಯಲ್ಲಿ ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗಿಲ್ಲ. ರಾಜ್ಯದಿಂದ ಹೈಕಮಾಂಡ್‌ಗೆ ದುಡ್ಡು ಕಳಿಸುತ್ತೇವೆ ಎಂಬುದೆಲ್ಲ ಸುಳ್ಳು. ನಾವು ಯಾರಿಗೂ ಒಂದು ಪೈಸೆ ಕೊಟ್ಟಿಲ್ಲ ಎಂದರು.
ಸಂಪುಟ ವಿಸ್ತರಣೆ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು. ಎಲ್ಲರಿಗೂ ಮಂತ್ರಿಯಾಗುವ ಆಸೆ ಇರುತ್ತದೆ. ಸದ್ಯಕ್ಕೆ ಈ ರೀತಿಯ ಚರ್ಚೆ ಇಲ್ಲ, ಎಲ್ಲಾ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಈ ರೀತಿಯ ಚರ್ಚೆ ಯಾವುದು ಇಲ್ಲ. ಎಲ್ಲಾ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಜಾರಿಕೊಂಡರು.
ವಿದ್ಯುತ್ ಸಮಸ್ಯೆ ನಿವಾರಿಸಲು ರಾಜ್ಯ ಸರ್ಕಾರ ಕ್ರಮಕೈಗೊಂಡಿದೆ. ಶುಗರ್ ಕಾರ್ಖಾನೆಯಲ್ಲಿ ಉತ್ಪಾದನೆಯಾಗುವ ವಿದ್ಯುತ್ ಖರೀದಿ ಮಾಡಲು ಚಿಂತಿಸಲಾಗಿದೆ. ಹೊರ ರಾಜ್ಯದಿಂದಲೂ ವಿದ್ಯುತ್ ಖರೀದಿಗೆ ಸೂಚನೆ ನೀಡಲಾಗಿದೆ. ಕುಮಾರಸ್ವಾಮಿ ಹೇಳಿದಂತೆ ಕೃತಕ ವಿದ್ಯುತ್ ಕ್ಷಾಮ ಸೃಷ್ಟಿ ಮಾಡಿಲ್ಲ. ಈಗಿರುವ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ನಿಭಾಯಿಸುತ್ತೆ ಎಂದು ಮಾಹಿತಿ ನೀಡಿದರು.