ಬೆಂಗಳೂರು: ಬಿಜೆಪಿ, ಜನತಾ ದಳದವರಿಗೆ ಗೃಹ ಲಕ್ಷ್ಮೀ ಯೋಜನೆ ಜಾರಿಯನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಅವರ ಅಸೂಯೆಗೆ ಮದ್ದಿಲ್ಲ. ನಮ್ಮ ಯೋಜನೆ ಬಗ್ಗೆ ಮಾತನಾಡುವವರು ಮೊದಲು ಬಿಜೆಪಿಯವರ ಉದ್ಯೋಗ ಭರವಸೆ ಬಗ್ಗೆ ಮಾತಾಡಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಸದಾಶಿವನಗರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರ ಖಾತೆಗೆ 15 ಲಕ್ಷ ಹಾಕಿಸಲಿ. ಆ ಬಗ್ಗೆ ಯಾಕೆ ಯಾರೂ ಕೇಳುತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವವರನ್ನು ಬೇಡ ಎನ್ನಲು ಸಾಧ್ಯವೇ? ಎಂದು ಹೇಳಿದರು.
ಮನೆ ಯಜಮಾನಿ ಯಾರು ಎಂದು ಮನೆಯವರೇ ತೀರ್ಮಾನ ಮಾಡಬೇಕು. ಅವರ ಮನೆ ವಿಚಾರದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ
ಮತದಾರರ ಗುರುತಿನಿ ಚೀಟಿ, ಎಪಿಎಲ್, ಬಿಪಿಎಲ್ ಕಾರ್ಡ್ ಗಳಲ್ಲಿ ಯಾವ ಮನೆಯಲ್ಲಿ ಯಾರೆಲ್ಲಾ ಇದ್ದಾರೆ ಎಂದು ಮಾಹಿತಿ ಇದೆ ಎಂದರು.
ಸರ್ಕಾರದಿಂದ ಯಾರಿಗೆ ಒಂದು ರೂಪಾಯಿ ಹಣ ಕೊಟ್ಟರೂ ಅದಕ್ಕೆ ಲೆಕ್ಕ, ಹೊಣೆಗಾರಿಕೆ ಇರಬೇಕು. ಫಲಾನುಭವಿ ಆಗುವವರು ಮತದಾರರ ಗುರುತಿನ ಚೀಟಿ, ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ಹೊಂದಿರಬೇಕು. ಬೇರೆಯವರ ಬ್ಯಾಂಕ್ ಖಾತೆಗೆ ಹಣ ನೀಡಲಾಗುವುದಿಲ್ಲ ಎಂದರು.
ತೆರಿಗೆ ಪಾವತಿದಾರರು ನಿಮಗೆ ಮತ ಹಾಕಿಲ್ಲವೇ ಎಂದು ಕೇಳಿದಾಗ, ನಾವು ಬಡವರಿಗೆ ನೆರವು ನೀಡಲು ನಿರ್ಧರಿಸಿದ್ದೇವೆ. ತೆರಿಗೆ, ಜಿಎಸ್ಟಿ ಪಾವತಿದಾರರು ಈ ಯೋಜನೆ ಬೇಕು ಎಂದು ಕೇಳುತ್ತಿಲ್ಲ. ಅನೇಕರು ಈ ಯೋಜನೆ ಬೇಡ ಎಂದು ನಮಗೆ ಪತ್ರ ಬರೆದಿದ್ದಾರೆ. ವಿದ್ಯುತ್ ಗ್ಯಾರಂಟಿ ವಿಚಾರದಲ್ಲಿ ಬಾಡಿಗೆ ಮನೆಯವರ ಬಗ್ಗೆ ಅಧಿಕಾರಿಗಳು ಒಂದು ಆಯಾಮ ನೀಡಿದ್ದರು. ಆದರೆ ನಾವು ಆ ಬಗ್ಗೆ ಸ್ಪಷ್ಟನೆ ನೀಡಿದ್ದೇವೆ ಎಂದರು.