ಬೆಂಗಳೂರು: ಆರ್ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದ ನೈತಿಕ ಹೊಣೆಯನ್ನು ರಾಜ್ಯಸರ್ಕಾರ ಹೊರಬೇಕು ಎಂದು ಆಗ್ರಹಿಸಿ , ಮಳೆಗಾಲದ ಅಧಿವೇಶನದ ಮೊದಲ ದಿನ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಉಗ್ರ ಪ್ರತಿಭಟನೆ ನಡೆಸಿದರು. ಸರ್ಕಾರ ವಿರೋಧಿ ಘೋಷಣೆಗಳನ್ನು ಕೂಗಿ, ಫಲಕಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, “ಕಾಲ್ತುಳಿತದ ನೈತಿಕ ಹೊಣೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳದ್ದೇ. ಅಧಿಕಾರಿಗಳಿಗೆ ಮೇಲೆ ಕ್ರಮದಿಂದ ತಪ್ಪು ಮುಚ್ಚಲಾಗದು,” ಎಂದು ಸಿಟ್ಟಿಗೆದ್ದರು. ರೈತ ಸಮಸ್ಯೆ, ಖಾಲಿ ಹುದ್ದೆ ನೇಮಕಾತಿ, ಪಿಎಸ್ಐ ನೇಮಕಾತಿ ವಿಷಯಗಳಲ್ಲೂ ಸರ್ಕಾರ ವಿಫಲವಾಗಿದೆ ಎಂದು ಹೇಳಿದರು.
ವಿಧಾನಸಭೆ ವಿರೋಧಪಕ್ಷದ ನಾಯಕ ಆರ್. ಅಶೋಕ್ ಅವರು, “60 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಕಾಂಗ್ರೆಸ್ ಬ್ರಾಂಡ್ ಆಗಿದೆ. ಕಾಟಾಚಾರಕ್ಕೆ 9 ದಿನದ ಅಧಿವೇಶನ. RCB ಕಾಲ್ತುಳಿತದ ವೇಳೆಯೆ ಮುಖ್ಯಮಂತ್ರಿಗಳು ದೋಸೆ ತಿನ್ನಲು ಹೋಗಿದ್ದರು,” ಎಂದು ತೀವ್ರವಾಗಿ ಟೀಕಿಸಿದರು. 11 ಜನರು ಸಾವನ್ನಪ್ಪಿದ್ದು ಸರ್ಕಾರದ ನೈತಿಕ ದೌರ್ಬಲ್ಯ ಎಂದು ಹೇಳಿದರು.
ಜೆಡಿಎಸ್ ಮುಖಂಡ ಎಸ್.ಎಲ್. ಭೋಜೇಗೌಡ ಅವರು, “ರಾಜ್ಯದಲ್ಲಿ ಸರ್ಕಾರವಿದೆಯೋ ಇಲ್ಲವೋ ಎಂಬಂತಾಗಿದೆ. ಕಾಲ್ತುಳಿತದ ನೈತಿಕ ಹೊಣೆ ಸಿಎಂ, ಡಿಸಿಎಂ ಹೊರಬೇಕು. ಕ್ರಿಡಾಂಗಣದಲ್ಲಿ ನಡೆದ ಘಟನೆ ನಮ್ಮ ಸಂಬಂಧವಲ್ಲ ಎಂದಂತೆ ಉತ್ತರಿಸುವುದು ಅಕ್ಷಮ್ಯ” ಎಂದರು.
ವಿಧಾನಪರಿಷತ್ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, “RCB ಕ್ರೆಡಿಟ್ ತೆಗೆದುಕೊಳ್ಳಲು ಸರ್ಕಾರ ಮುಂದಾಗಿ ದುರಂತಕ್ಕೆ ಕಾರಣವಾಯಿತು. ಕಪ್ ಬಂದರೆ ಕ್ರೆಡಿಟ್, ದುರಂತವಾದ್ರೆ ಜವಾಬ್ದಾರಿ ತಪ್ಪುವುದು ಸರಿಯಲ್ಲ. ಭ್ರಷ್ಟಾಚಾರ, ಕಾನೂನು ಸುವ್ಯವಸ್ಥೆ ಹದಗೆಟ್ಟಿವೆ” ಎಂದು ಒತ್ತಾಯಿಸಿದರು.
11 ಜನರನ್ನು ಬಲಿ ಪಡೆದ RCB ಕಾಲ್ತುಳಿತ ದುರಂತದ ನೈತಿಕ ಹೊಣೆ ನಿರ್ವಹಿಸುವಂತೆ ಒತ್ತಾಯಿಸಿ, ಸದನದ ಒಳಗೂ ಹೊರಗೂ ಬಿಜೆಪಿ-ಜೆಡಿಎಸ್ ನಾಯಕರು ಸರ್ಕಾರದ ವಿರುದ್ಧ ಹೋರಾಟ ಘೋಷಿಸಿದ್ದಾರೆ.